ಕರ್ನಾಟಕದಲ್ಲಿ 15 ಸಣ್ಣ ವಿಮಾನ ನಿಲ್ದಾಣ ನಿರ್ಮಾಣ – ಯಾವ ಜಿಲ್ಲೆಯಲ್ಲಿ ಎಲ್ಲಿ ಸ್ಥಾಪನೆ?

Public TV
2 Min Read
Airport

ಬೆಂಗಳೂರು: ಕರ್ನಾಟಕದಲ್ಲಿ ಆಂತರಿಕ ವಿಮಾನಯಾನ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ರಾಜ್ಯದಲ್ಲಿ 15 ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಶೀಘ್ರಗತಿಯಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾರ್ಯಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ 38 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ಈ ಸಂಬಂಧ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಜೊತೆ ಶನಿವಾರ ತಿಳುವಳಿಕ ಪತ್ರಕ್ಕೆ ಸಹಿ ಮಾಡಲಾಗಿದೆ. ಇದರೊಂದಿಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ 181 ಕೋಟಿ ರೂ. ಅನುದಾನ ನೀಡಲಾಗಿದೆ.

Airport 1

ಕನಿಷ್ಠ 15 ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿಯ ಕುರಿತು ಎಸ್‍ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಪ್ಲಾನ್ ಮಾಡಿಕೊಳ್ಳುತ್ತಿದೆ. ಈ ವಿಚಾರವಾಗಿ ಸರ್ಕಾರ ಮತ್ತು ಎಎಐ ಅಧಿಕಾರಿಗಳ ನಡುವೆ ಎರಡು ದಿನಗಳಿಂದ ಮಾತುಕತೆ ನಡೆದಿತ್ತು. ನಾಗರೀಕ ವಿಮಾನಯಾನ ನೀತಿಯನ್ವಯ 15 ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿ ಮೂಲಕ ಪ್ರಾದೇಶಿಕವಾಗಿ ವಾಯುಯಾನದ ಸೇವೆ ಲಭ್ಯವಾಗಲಿದೆ ಎಂದು ಎಎಐನ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಜಿ. ಜೋಶಿ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ಕಾರ್ಯ ಆರಂಭಗೊಂಡಿವೆ. ಎರಡನೇ ಹಂತದಲ್ಲಿ ರಾಯಚೂರು, ಹಾಸನ, ಕಾರವಾರ, ವಿರಾಜಪೇಟೆ (ಕೊಡಗು), ಕೋಲಾರ, ಯಾದಗಿರಿ ಮತ್ತು ಬಳ್ಳಾರಿ ನಗರಗಳನ್ನು ಗುರುತಿಸಲಾಗಿದೆ.

Airport 1 1

ಬೆಳಗಾವಿ ಮತ್ತು ಮೈಸೂರು ವಿಮಾನ ನಿಲ್ದಾಣಗಳಿಗೆ ಬೇಕಾದ ಜಮೀನು ಪಡೆದುಕೊಳ್ಳಲಾಗಿದೆ. ಈ ವರ್ಷದ ಅಂತ್ಯದಲ್ಲಿ ಈ ಎರಡೂ ವಿಮಾನ ನಿಲ್ದಾಣಗಳ ಕೆಲಸ ಸಂಪೂರ್ಣವಾಗಲಿದೆ. ಪ್ರತಿನಿತ್ಯ ಬೆಳಗಾವಿಯಲ್ಲಿ 13 ಮತ್ತು ಮೈಸೂರಿನಲ್ಲಿ 8 ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು (ಮಂಡಕಳ್ಳಿ), ಬೆಳಗಾವಿ (ಸಾಂಬ್ರಾ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ನಡೆಯುತ್ತಿದ್ದು, ವಿಮಾನಗಳ ಹಾರಾಟ ಸಹ ಆರಂಭಗೊಂಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ರಾಜ್ಯದ ಅತಿ ಹೆಚ್ಚು ಜನಸಂದಣಿ ಹೊಂದಿರುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಗಳೂರು ನಾಗರೀಕ ವಿಮಾನಯಾನ ಮತ್ತು ವಾಣಿಜ್ಯ ಚಟುವಟಿಕೆ ಸೇವೆಯನ್ನು ಹೊಂದಿದೆ. ಕಲಬುರಗಿ ನಿಲ್ದಾಣಕ್ಕೆ ಅಲಯನ್ಸ್ ಏರ್ ಮತ್ತು ಘೋಧ್ವತ್ ಏವಿಯೇಷನ್ ಸೇವೆಯನ್ನು ಆರಂಭಿಸಿವೆ. ಕಲಬುರಗಿಯಿಂದ ನೇರವಾಗಿ ಬೆಂಗಳೂರು, ಘಾಜಿಯಾಬಾದ್, ಉತ್ತರ ಪ್ರದೇಶ ಮತ್ತು ತಿರುಪತಿಗೆ ವಿಮಾನ ಸಂಪರ್ಕ ಕಲ್ಪಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *