ಬೆಳಗಾವಿ: ಜನರ ನಡುವೆಯೇ ನೂತನ ಸಚಿವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.
ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮ ಮಾಂಜರಿ ಭೇಟಿ ನೀಡಿದ್ದರು. ಗ್ರಾಮದ ಪ್ರವಾಹ ಪರಿಸ್ಥಿತಿ ಅವಲೋಕನದ ವೇಳೆ ಶಶಿಕಲಾ ಅವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಲ್ಲದೆ ಪರಿಹಾರ ಕೊಡುವಲ್ಲಿ ರಾಜಕೀಯ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಮಾತನಾಡಿದ ಶಶಿಕಲಾ ಅವರು, ಶೇ.15ರಿಂದ 20ರಷ್ಟು ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ 25 ಸಾವಿರ ರೂ., ಶೇ. 50ರಿಂದ 75ರಷ್ಟು ಮನೆ ಕಳೆದುಕೊಂಡವರಿಗೆ ಅವರಿಗೆ 1 ಲಕ್ಷ ರೂ. ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಅವರಿಗೆ 5 ಲಕ್ಷ ರೂ. ನೀಡಲಾಗುತ್ತೆ. ಈ ಹಣವನ್ನು ಯಾರು ದುರುಪಯೋಗ ಮಾಡದಂತೆ ಪ್ರಮಾಣಿಕವಾಗಿ ಸಂತ್ರಸ್ತರಿಗೆ ಉಪಯೋಗ ಆಗುವಂತೆ ಈ ಊರಿನವರೇ ಅಧಿಕಾರಗಳ ಜೊತೆಗೂಡಿ ಕೆಲಸ ಮಾಡಬೇಕು ಎಂದರು.
ಬಳಿಕ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ರಾಜಕೀಯ ಮಾಡಬೇಡಿ. ಅವರು ಪ್ರೆಷರ್ ಹಾಕಿದ್ರು, ಇವರು ಪ್ರೆಷರ್ ಹಾಕಿದ್ರು ಎಂದು ನನ್ನ ಬಳಿ ಹೇಳಿದ್ದರೆ ನಾನು ಸುಮ್ಮನೆ ಇರುವುದಿಲ್ಲ. ಅವರು ಹೀಗಂದ್ರು ಇವರು ಹೀಗಂದ್ರು ಎಂದು ನನಗೆ ಸಬೂಬು ನೀಡಿದ್ದರೆ ನಾನು ಸಹಿಸುವುದಿಲ್ಲ. ಅಲ್ಲದೆ, ಈ ವಿಷಯದಲ್ಲಿ ಏನೇ ತಪ್ಪು ನಡೆದರೂ ಸಹ ಕ್ರಮ ಜರುಗಿಸುವ ಅಧಿಕಾರ ನನಗಿದೆ. ನನಗೆ ಅಲ್ಲದೆ ಹಿರಿಯ ಅಧಕಾರಿಗಳಿಗೆ, ಸರ್ಕಾರಕ್ಕೆ ಕ್ರಮ ಜರುಗಿಸುವ ಅಧಿಕಾರವಿದೆ ಎಂದು ಹೇಳಿದರು.