ಉಡುಪಿ: ರಾಜ್ಯ ಸರ್ಕಾರಕ್ಕೆ ಮತಿಯಿಲ್ಲ, ಜನಕ್ಕೆ ಗತಿಯಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಯು.ಟಿ ಖಾದರ್ ರಾಜ್ಯ ಸರ್ಕಾರವನ್ನ ಟೀಕಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಖಾದರ್, ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ. ಅವರ ಪಕ್ಷದ ನಾಯಕರ ಹೇಳಿಕೆಯಿಂದ ಇದು ಸಾಬೀತಾಗುತ್ತಿದೆ. ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯೇ ಇದಕ್ಕೆ ಸಾಕ್ಷಿ ಎಂದರು.
ರಾಜ್ಯಾದ್ಯಂತ ನೆರೆ ಪರಿಹಾರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಚೌಕಾಶಿ ಮಾಡುತ್ತಿದೆ. ಪ್ರತಿ ಮನೆಗೆ 50 ಸಾವಿರ ಪ್ರಾಥಮಿಕ ಪರಿಹಾರ ಕೊಡಿ. ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲಿ ನಾವು 35 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ. ನಿಮಗೆ ಒಂದು ಸಾವಿರ ಕೋಟಿ ಕೊಡಲು ಏನು ಕಷ್ಟ ಎಂದು ಚಾಟಿ ಬೀಸಿದರು.
ನಳಿನ್ ಕುಮಾರ್ ಕಟೀಲ್‍ಗೆ ಬಿಜೆಪಿ ಅಧ್ಯಕ್ಷ ಸ್ಥಾನಕೊಟ್ಟ ಬಗ್ಗೆ, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಯು.ಟಿ, ಸಂಸದರಾಗಿ ನಳೀನ್ ಕುಮಾರ್ ಕಟೀಲ್ ಕೆಲಸ ಮಾಡಿಲ್ಲ. ರಾಜ್ಯಾಧ್ಯಕ್ಷರ ಪ್ರಭಾವ ಬಳಸಿ ಕೇಂದ್ರ-ರಾಜ್ಯ ಸರ್ಕಾರಗಳ ಸಹಾಯ ಪಡೆದು ಅಭಿವೃದ್ಧಿ ಕೆಲಸ ಮಾಡಲಿ ಎಂದು ಹಾರೈಸಿದರು.