ಪಿಎಂ ಹತ್ರ ಮಾತಾಡೋಕೆ ಸಿಎಂಗೆ ಧೈರ್ಯವಿಲ್ಲದಿದ್ದರೇ ನಮ್ಮನ್ನ ಕರೆದುಕೊಂಡು ಹೋಗ್ಲಿ: ಸಿದ್ದರಾಮಯ್ಯ

Public TV
2 Min Read
bgk siddu

ಬಾಗಲಕೋಟೆ: ಪ್ರವಾಹ ಬಂದು ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಪ್ರಧಾನಿ ಜೊತೆ ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲದಿದ್ದರೆ ನಮ್ಮನಾದರೂ ಕರೆದುಕೊಂಡು ಹೋಗಲಿ. ನಾವಾದರೂ ಮಾತನಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಾದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರವಾಹದಿಂದ ಅಂದಾಜು 1 ಲಕ್ಷ ಕೋಟಿ ರೂ. ನಷ್ಟವಾಗಿದೆ. ಆದರೆ ಸದ್ಯಕ್ಕೆ ನಾವು ಪ್ರವಾಹ ಪರಿಹಾರಕ್ಕೆ ಐದು ಸಾವಿರ ಕೋಟಿ ಕೊಡಿ ಎಂದು ಕೇಳಿದ್ದೇವೆ. ಆ ಮೇಲೆ ವರದಿ ಆಧಾರದ ಮೇಲೆ ಹೆಚ್ಚಿನ ಪರಿಹಾರ ಕೊಡಲಿ. ಕೇಂದ್ರ ಸರ್ಕಾರ ಕೊಡದಿದ್ದರೆ ರಾಜ್ಯ ಸರ್ಕಾರವಾದರೂ ಕೊಡಲಿ. ಪ್ರಧಾನಿ ಜೊತೆ ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲದಿದ್ದರೆ ನಮ್ಮನಾದರೂ ಕರೆದುಕೊಂಡು ಹೋಗಲಿ, ನಾವಾದರೂ ಮಾತನಾಡುತ್ತೇವೆ. ಜನರು ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೇ ನಿರ್ಲಕ್ಷ್ಯ ಮಾಡಿದೆ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಬಿಜೆಪಿ ಸರ್ಕಾರ ಪ್ರವಾಹ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

RAIN 11 copy

ಕೇಂದ್ರ ಗೃಹ ಸಚಿವ ಅಮಿತ್ ಶಾ ವರು ರಾಜ್ಯಕ್ಕೆ ಭೇಟಿ ಕೊಟ್ಟು ಪ್ರವಾಹದ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅವರಾದರೂ ಈ ಬಗ್ಗೆ ಮಾತನಾಡಿ ಪರಿಹಾರ ಬಿಡುಗಡೆ ಮಾಡಬೇಕಿತ್ತು. ಆದರೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಅಮಿತ್ ಶಾ ಅವರು ಬಹಳ ಪವರ್‍ಪುಲ್ ಮ್ಯಾನ್. ಮೋದಿಗೆ ಆಪ್ತರು, ಅವರೂ ಕೂಡ ಪರಿಹಾರದ ಬಗ್ಗೆ ಗಮನಕೊಟ್ಟಿಲ್ಲ. ರಾಜ್ಯದ ಜನ 25 ಸಂಸದರನ್ನ ಆಯ್ಕೆ ಮಾಡಿ ಕಳಿಸಿದ್ದಾರೆ ಅವರೆಲ್ಲಾ ಏನು ಮಾಡುತ್ತಿದ್ದಾರೆ? ಪ್ರಧಾನಮಂತ್ರಿ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಡದೆ ನಿರ್ಲಕ್ಷಿಸಿದ್ದಾರೆ. ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರಿದ್ದಾರೆ. ಪ್ರವಾಹ ಎದುರಾಗಿ 15 ದಿನ ಕಳೆದರೂ 1 ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ, ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೂ ಹೀಗಾಗುತ್ತಿದೆ. ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ರಾಜ್ಯದಲ್ಲಿ ಪ್ರವಾಹ ಬಂದಾಗ ಇಲ್ಲಿಗೆ ಭೇಟಿಕೊಟ್ಟು, ಪರಿಹಾರ ಬಿಡುಗಡೆ ಮಾಡಿದ್ದರು. ಆದರೆ ಈಗಿನ ಪ್ರಧಾನಿ ಆ ಕೆಲಸ ಮಾಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಪ್ರವಾಹಕ್ಕೆ ಬಾದಾಮಿ ತತ್ತರಿಸಿ ಹೋಗಿದೆ. ಎಲ್ಲಾ ಕಡೆ ಶೆಡ್ ಹಾಕಿಕೊಡಿ ಎಂದು ಸಂತ್ರಸ್ತರು ಗೋಳಾಡುತ್ತಿದ್ದಾರೆ. 43 ಹಳ್ಳಿಯ ಜನರು ನಮ್ಮನ್ನ ಸ್ಥಳಾಂತರಿಸಿ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಸರ್ಕಾರ ನಡೆಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ದೂರಿದರು.

CM BSY

ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮನೆ ಮೇಲೆ ಐಟಿ ಹಾಗೂ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಗೊತ್ತಿಲ್ಲಪ್ಪ, ಅವರು ಕೋರ್ಟಿಗೆ ಹೋಗಿದ್ದಾರೆ ಎಂದರು. ಬಳಿಕ ಬಿಜೆಪಿ ಸರ್ಕಾರ ಸಚಿವ ಸಂಪುಟ ಅಸಮಾಧಾನದ ಬಗ್ಗೆ ಪ್ರಶ್ನಿಸಿದಾಗ ಮಾತನಾಡದೇ ಸಿದ್ದರಾಮಯ್ಯ ಅವರು ಹೊರಟುಹೋದರು.

Share This Article
Leave a Comment

Leave a Reply

Your email address will not be published. Required fields are marked *