ಸಚಿವ ಸಂಪುಟ ರಚಿಸಿದ ಬಿಎಸ್‍ವೈಗೆ ಅಮಿತ್ ‘ಶಾ’ಕ್!

Public TV
2 Min Read
bs yeddyurappa

-ಬಂಡಾಯ ಶಾಸಕರನ್ನ ನೀವೇ ಸಮಾಧಾನ ಮಾಡಿ!

ಬೆಂಗಳೂರು: ಸಚಿವ ಸಂಪುಟ ರಚಿಸಿದ ಸಿಎಂ ಬಿಎಸ್ ಯಡಿಯೂರಪ್ಪರಿಗೆ ಶಾಕ್ ಮೇಲೆ ಶಾಕ್ ಎದುರಿಸುತ್ತಿದ್ದಾರೆ. ಒಂದು ಕಡೆ ಸ್ವಪಕ್ಷೀಯರ ಬಂಡಾಯ, ಮತ್ತೊಂದು ಕಡೆ ಅತೃಪ್ತರ ಬಿಸಿ, ಇನ್ನೊಂದು ಕಡೆ ಹೈಕಮಾಂಡ್ ವಾರ್ನಿಂಗ್ ಬಿಎಸ್‍ವೈಗೆ ಸಂಕಟ ತಂದೊಡ್ಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ, ಬಂಡಾಯ ಸ್ಫೋಟಗೊಂಡಿದೆ. ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಹೊನ್ನಾಳಿಯ ರೇಣುಕಾಚಾರ್ಯ, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಸುಳ್ಯ ಅಂಗಾರ, ಚನ್ನಹಳ್ಳಿಯ ಮಾಡಾಳ್ ವಿರೂಪಾಕ್ಷಪ್ಪ, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಸಚಿವ ಸ್ಥಾನ ಕೈತಪ್ಪಿದ ಹಲವು ನಾಯಕರು ಬೇಸರಗೊಂಡಿದ್ದಾರೆ. ಬೆಂಬಲಿಗ ಕಾರ್ಯಕರ್ತರು ಬೆಂಕಿ ಹಚ್ಚಿ ಆಕ್ರೋಶಗೊಂಡಿದ್ದಾರೆ. ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ ಬೆಂಬಲಿಗರ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

BSY Cabinet

ಸಚಿವ ಸ್ಥಾನ ವಂಚಿತರ ಬಂಡಾಯ ಶಮನಕ್ಕೆ ಸಂಜೆ ಭೇಟಿಯಾಗುವಂತೆ ಎಲ್ಲರಿಗೂ ಯಡಿಯೂರಪ್ಪನವರು ಬುಲಾವ್ ನೀಡಿದರು. ಆದರೆ ಸಿಎಂ ಭೇಟಿಗೂ ಮುನ್ನವೇ ಕೆಲ ಅಸಮಾಧಾನಿತ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ ಶ್ರೀಮಂತ ಪಾಟೀಲ್, ಹೊಳಲ್‍ಕೆರೆ ಚಂದ್ರಪ್ಪ ರಹಸ್ಯ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ರೇಣುಕಾಚಾರ್ಯ, ಇದು ಅತೃಪ್ತರ ಸಭೆಯಲ್ಲ. ನಾವೆಲ್ಲಾ ಬೆಂಗಳೂರಿಗೆ ಬರೋದು ತಡವಾಯ್ತು. ಹೀಗಾಗಿ ಊಟ ಮಾಡೋಣ ಅಂತಾ ಇಲ್ಲಿ ಸೇರಿದ್ದೇವೆ. ನಾನು ಯಡಿಯೂರಪ್ಪರ ಬಂಟ ಎನ್ನುವ ಮೂಲಕ ಅಸಮಾಧಾನ, ಬೇಸರಕ್ಕೆ ತೇಪೆ ಹಚ್ಚಿದರು.

amit shah 4

ಈ ಎಲ್ಲ ಬೆಳವಣಿಗೆ ಗಮನಿಸಿದ ಅನರ್ಹ ಶಾಸಕರಿಗೂ ಸಚಿವ ಸ್ಥಾನ ಕೈತಪ್ಪುವ ಭೀತಿ ಎದುರಾಗಿದೆ. ಹೀಗಾಗಿ ರೆಬೆಲ್ ಸ್ಟಾರ್ ರಮೇಶ್ ಜಾರಕಿಹೊಳಿ ಮನೆಯಲ್ಲಿ ಅನರ್ಹರ ತುರ್ತು ಸಭೆ ಕೂಡ ನಡೆಯಿತು. ಈ ವೇಳೆ ನೂತನ ಸಚಿವ ಲಕ್ಷ್ಮಣ್ ಸವದಿ, ಸಿ.ಪಿ. ಯೋಗೇಶ್ವರ್ ಹಾಗೂ ಎ.ಮಂಜು ಕೂಡ ಬಂದಿದ್ದರು.

ಅಸಮಾಧಾನ, ಬಂಡಾಯವನ್ನ ಮೊದಲೇ ಮನಗಂಡಿದ್ದ ಬಿಜೆಪಿ ಚಾಣಾಕ್ಯ ಅಮಿತ್ ಶಾ, ಕ್ಯಾಬಿನೆಟ್ ಲಿಸ್ಟ್ ಕಳುಹಿಸಿಕೊಡುವ ಹೊತ್ತಲ್ಲೆ ಖಡಕ್ ಸಂದೇಶ ರವಾನಿಸಿದ್ದರು. ಬಂಡಾಯ ಶಾಸಕರನ್ನ ನೀವೇ ಸಮಾಧಾನ ಮಾಡಬೇಕು. ನಿಮ್ಮ ಕೈಯಲ್ಲಿ ಆಗಿಲ್ಲ ಅಂದ್ರೆ ಎಲೆಕ್ಷನ್‍ಗೆ ಹೋಗೋಣ. ಇದರಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *