ಬೆಂಗಳೂರು: ಭಾನುವಾರ ಬೆಳ್ಳಂಬೆಳಗ್ಗೆ ಮನೆಯಲ್ಲೇ ಉದ್ಯಮಿಯೊಬ್ಬರ ಮೃತದೇಹ ಸಿಕ್ಕಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸ್ವಂತ ಮಗಳೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ.
ರಾಜಾಜಿನಗರದ ಭಾಷ್ಯಂ ಸರ್ಕಲ್‍ನಲ್ಲಿ ಈ ಘಟನೆ ನಡೆದಿದ್ದು, ಜೈ ಕುಮಾರ್ ಜೈನ್ ಕೊಲೆಯಾದ ತಂದೆ. ಮಗಳು ತನ್ನ ಪ್ರಿಯಕರ ಪ್ರವೀಣ್ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಜೈಕುಮಾರ್ ಮೂಲತ: ಪಾಂಡಿಚೇರಿಯವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ನಗರದಲ್ಲಿ ಬಟ್ಟೆ ವ್ಯಾಪಾರ ಉದ್ಯಮವನ್ನು ನಡೆಸುತ್ತಿದ್ದು, ಕುಟುಂಬದ ಜೊತೆ ವಾಸವಾಗಿದ್ದರು. ಕೆಲಸದ ನಿಮಿತ್ತ ಶನಿವಾರ ಪತ್ನಿ ಹಾಗೂ ಮಗ ಪಾಂಡಿಚೇರಿಗೆ ತೆರಳಿದ್ದರು. ಆದರೆ ಭಾನುವಾರ ಜೈಕುಮಾರ್ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.
ಮನೆಯಲ್ಲಿ ಜೈ ಕುಮಾರ್ ಮತ್ತು ಮಗಳು ಮಾತ್ರ ಇದ್ದು, ಪೊಲೀಸರು ಮಗಳನ್ನ ವಿಚಾರಣೆ ಮಾಡಿದ್ದಾರೆ. ಆಗ ಮಗಳು ಬೆಳ್ಳಗ್ಗೆ ತಾನು ಸಂಬಂಧಿಕರ ಮನೆಗೆ ತಿಂಡಿಗೆ ಹೋಗಿದ್ದೆ. ವಾಪಸ್ಸು ಬಂದಾಗ ಸ್ನಾನದ ಕೋಣೆಯಲ್ಲಿ ನನ್ನ ತಂದೆ ಬೆಂಕಿಗೆ ಸಿಲುಕಿಕೊಂಡಿದ್ದರು. ಗ್ಲೀಸರ್ ಬ್ಲಾಸ್ಟ್ ಆಗಿತ್ತು. ನನ್ನ ಕಿರುಚಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಬಂದಿದ್ದರು. ಬೆಂಕಿ ಹಾರಿಸಲು ಹೋದ ಸಂದರ್ಭದಲ್ಲಿ ತನಗೂ ಬೆಂಕಿ ತಗುಲಿದ್ದು, ಚಿಕಿತ್ಸೆ ಪಡೆದಿದ್ದಾಗಿ ಹೇಳಿಕೆ ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದರು. ಆಗ ಮಗಳೇ ಕೊಲೆ ಮಾಡಿರುವ ಸತ್ಯ ಬೆಳಕಿಗೆ ಬಂದಿದೆ.
ಕೊಲೆಗೆ ಕಾರಣ:
10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳು ಪ್ರವೀಣ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇಬ್ಬರು ಬೈಕಿನಲ್ಲಿ ಸುತ್ತಾಡುತ್ತಿದ್ದರು. ಇದನ್ನು ಮೃತ ಜೈಕುಮಾರ್ ನೋಡಿ, ನಾನು ಯಾವುದೇ ಕಾರಣಕ್ಕೂ ನಿಮ್ಮಿಬ್ಬರನ್ನು ಮದುವೆಯಾಗಲೂ ಬಿಡುವುದಿಲ್ಲ ಎಂದು ಮಗಳಿಗೆ ಹಾಗೂ ಪ್ರವೀಣ್‍ಗೂ ಎಚ್ಚರಿಕೆ ಕೊಟ್ಟಿದ್ದರು. ಇದರಿಂದ ಕೋಪಗೊಂಡ ಮಗಳು ಪ್ರಿಯಕರನ ಜೊತೆ ಸೇರಿ ಅಪ್ಪನ ಕೊಲೆಗೆ ಸ್ಕೆಚ್ ಹಾಕಿದ್ದಾಳೆ.
ಪ್ರಿಯಕರನೊಂದಿಗೆ ಸೇರಿ ಮಗಳೇ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿ ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾರೆ. ಮೊದಲಿಗೆ ಹಾಲಿನಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ನಂತರ ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಚಾಕುವಿನಿಂದ ಕತ್ತು, ಹೊಟ್ಟೆ ಇರಿದಿದ್ದಾರೆ. ಬೇರೆ ಕಡೆ ದೇಹವನ್ನ ಬಿಸಾಡಲಿಕ್ಕೆ ಪ್ಲಾನ್ ಮಾಡಿದ್ದರು. ಆದರೆ ಭಯಗೊಂಡು ಸ್ನಾನದ ಕೋಣೆಯಲ್ಲಿ ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾರೆ. ಬಳಿಕ ತಮ್ಮ ಮೇಲೆ ಅನುಮಾನ ಬರಬಾರದೆಂದು ಮಗಳೆ ನೆರೆಹೊರೆಯವರಿಗೆ ಮನೆಗೆ ಬೆಂಕಿ ಬಿದ್ದಿದೆ ಎಂದು ಹೇಳಿದ್ದಾಳೆ ಎಂದು ಉತ್ತರ ವಲಯ ಡಿಸಿಪಿ ಶಶಿಕುಮಾರ್ ಹೇಳಿದ್ದಾರೆ.