ಹೈದರಾಬಾದ್: ಮಗನೊಬ್ಬ ತಂದೆಯನ್ನೇ ಕೊಂದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ 7 ಪ್ಲಾಸ್ಟಿಕ್ ಬಕೆಟ್‍ನಲ್ಲಿ ತುಂಬಿಟ್ಟಿದ್ದ ಭಯಾನಕ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಶುಕ್ರವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಕಜ್‍ಗಿರಿ ನಿವಾಸಿ ಮಾರುತಿ(80) ಕೊಲೆಯಾದ ದುರ್ದೈವಿ. ಕಿಶನ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ನಿರುದ್ಯೋಗಿಯಾಗಿದ್ದ ಕಿಶನ್ ಯಾವಾಗಲೂ ತಂದೆ ಮಾರುತಿ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದನು. ಹಲವು ಬಾರಿ ಇದೇ ವಿಚಾರಕ್ಕೆ ತಂದೆ, ಮಗನ ನಡುವೆ ಜಗಳ ನಡೆಯುತಿತ್ತು. ಆದರೆ ಶುಕ್ರವಾರ ಈ ಗಲಾಟೆ ಜೋರಾಗಿ ಸಿಟ್ಟಿಗೆದ್ದ ಮಗ ತಂದೆಯನ್ನೇ ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿಯೇ ಮೃತದೇಹವನ್ನು ಕತ್ತರಿಸಿ, 7 ಪ್ಲಾಸ್ಟಿಕ್ ಬಕೆಟ್‍ನಲ್ಲಿ ತುಂಬಿಸಿಟ್ಟಿದ್ದನು. ಈ ಬಗ್ಗೆ ತಾಯಿ, ತಂಗಿಗೆ ತಿಳಿಸಿದ್ದರೂ ಅವರು ಕಿಶನ್ ತಮಗೂ ಈ ರೀತಿ ಮಾಡಿಬಿಡುತ್ತಾನೆ ಎಂಬ ಭಯದಿಂದ ಸುಮ್ಮನಿದ್ದರು.
ಭಾನುವಾರದ ಹೊತ್ತಿಗೆ ಅಕ್ಕಪಕ್ಕದ ಮನೆಯವರಿಗೆ ಕೊಳೆತ ವಾಸನೆ ಬಂದ ಹಿನ್ನೆಲೆ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ 7 ಪ್ಲಾಸ್ಟಿಕ್ ಬಕೆಟಿನಲ್ಲಿ ಅಡಗಿಸಿಟ್ಟಿದ್ದ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆ ಮೃತಪಟ್ಟ ಮಾರುತಿ ಅವರ ಪತ್ನಿ ಹಾಗೂ ಮಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಿಶನ್ ಕೊಲೆ ಮಾಡಿದ ನಂತರ ಪರಾರಿಯಾಗಿದ್ದಾನೆ. ಕಿಶನ್ ಮೇಲಿದ್ದ ಭಯದಿಂದಾಗಿ ನಾವು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ವಿಚಾರಣೆಯ ಸಮಯದಲ್ಲಿ ಪತ್ನಿ ಹಾಗೂ ಮಗಳು ಬಾಯಿಬಿಟ್ಟಿದ್ದಾರೆ. ಆದರೆ ಪೊಲೀಸರು ಆರೋಪಿ ಸೇರಿ ಈ ಇಬ್ಬರ ಮೇಲೂ ಅನುಮಾನ ವ್ಯಕ್ಯಪಡಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಮೂಲತಃ ಮಹಾರಾಷ್ಟ್ರದವರಾದ ಮಾರುತಿ ಅವರ ಕುಟುಂಬ, 20 ವರ್ಷದ ಹಿಂದೆ ಹೈದರಾಬಾದ್‍ಗೆ ಬಂದು ನೆಲೆಸಿದ್ದರು. ಅಲ್ಲದೆ ಮೃತಪಟ್ಟ ಮಾರುತಿ ಅವರು ಗೂಡ್ಸ್ ರೈಲಿನ ಲೋಕೋ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಆರೋಪಿ ಸೇರಿ ಒಟ್ಟು ನಾಲ್ವರು ಮಕ್ಕಳಿದ್ದು, ಹಿರಿಯ ಮಗ ಕೆಲ ವರ್ಷದ ಹಿಂದೆ ಕಾಣೆಯಾಗಿದ್ದಾನೆ. ಒಬ್ಬಳು ಮಗಳಿಗೆ ಮದುವೆಯಾಗಿದ್ದು, ಇನ್ನೊಬ್ಬಳು ಮನೆಯಲ್ಲಿಯೇ ಇದ್ದಾಳೆ.