ಚಿಕ್ಕಬಳ್ಳಾಪುರ: ನೆರೆಪೀಡಿತ ಜನರ ಸಂಕಷ್ಟಕ್ಕೆ ಮಿಡಿದ ಬಿಕ್ಕಲಹಳ್ಳಿ ಗ್ರಾಮಸ್ಥರು ನೆರೆಪೀಡಿತ ಗ್ರಾಮವೊಂದನ್ನ ದತ್ತು ಪಡೆಯುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ತಮ್ಮ ಗ್ರಾಮದ ದೇವಾಲಯದ ಹುಂಡಿಗೆ ಹಣ ಹಾಕಬೇಡಿ, ಬದಲಾಗಿ ನೆರೆ ಸಂತ್ರಸ್ತರಿಗೆ ಹಣ ನೀಡಿ ಎಂದು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ನೆರೆಗೆ ಸ್ಪಂದಿಸಿರುವ ಗೌರಿಬಿದನೂರು ತಾಲೂಕಿನ ಬಿಕ್ಕಲಹಳ್ಳಿ ಗ್ರಾಮಸ್ಥರು ಅಕ್ಕಿ, ಬೇಳೆ, ಚಾಪೆ, ಬಟ್ಟೆ ಸೇರಿದಂತೆ ಜಾನುವಾರುಗಳಿಗೆ ಮೇವು ಸಂಗ್ರಹಣೆ ಮಾಡಿದ್ದಾರೆ. ಸದ್ಯ ಈ ಎಲ್ಲಾ ಅಗತ್ಯ ಸಾಮಾಗ್ರಿಗಳನ್ನ ನೆರೆ ಸಂತ್ರಸ್ತರಿಗೆ ತಲುಪಿಸಲು ಮುಂದಾಗಿದ್ದಾರೆ.
ಕೇವಲ ಪರಿಹಾರ ಸಾಮಾಗ್ರಿಗಳನ್ನ ಕಳಿಸುವುದಲ್ಲದೇ ನೆರೆಪೀಡಿತ ಗ್ರಾಮವೊಂದನ್ನ ಒಂದು ವರ್ಷಕ್ಕೆ ದತ್ತು ಪಡೆಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ಗ್ರಾಮದ ಯೋಗಮುನೇಶ್ವರಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಲ್ಲಿ ಹುಂಡಿಗೆ ಹಣ ಹಾಕುವ ಬದಲು ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ದೇವಾಲಯಕ್ಕೆ ಬರುವ ಆದಾಯದ ಹಣವನ್ನು ನೆರೆಪೀಡಿತ ಗ್ರಾಮಕ್ಕೆ ಮೀಸಲಿಡಲು ಮುಂದಾಗಿದ್ದಾರೆ ಎಂದು ದೇವಾಲಯದ ಸಂಸ್ಥಾಪಕರಾದ ಮಂಜುನಾಥ್ ತಿಳಿಸಿದರು.
ಒಂದು ವರ್ಷ ನೆರೆಪೀಡಿತ ಗ್ರಾಮವನ್ನ ದತ್ತು ಪಡೆದು, ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುವುದು ಗ್ರಾಮಸ್ಥರ ಉದ್ದೇಶವಾಗಿದೆ.