ದೆಹಲಿಯ ಏಮ್ಸ್ ಆಸ್ಪತ್ರೆಯ ಕಟ್ಟಡದಲ್ಲಿ ಬೆಂಕಿ- 34 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

Public TV
1 Min Read
aiims

ನವದೆಹಲಿ: ನಗರದ ಪ್ರಸಿದ್ಧ ಏಮ್ಸ್ ಆಸ್ಪತ್ರೆಯ ಕಟ್ಟಡದ ಎಮರ್ಜೆನ್ಸಿ ವಾರ್ಡ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 34 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿವೆ.

34 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದರೂ ಸಹ ಬೆಂಕಿ ಹತೋಟಿಗೆ ಬರುತ್ತಿಲ್ಲ. ಅಗ್ನಿಯು ಕ್ರಮೇಣವಾಗಿ ಕಟ್ಟಡವನ್ನು ಆವರಿಸಿಕೊಳ್ಳುತ್ತಿದೆ. ಬೆಂಕಿಯ ವ್ಯಾಪಕತೆ ಹೆಚ್ಚಿದ್ದರೂ ಸಹ ಈವರೆಗೆ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಆಸ್ಪತ್ರೆಯ ತುರ್ತು ವಾರ್ಡ್ ಬಳಿಯ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಯು ಕಟ್ಟಡದಿಂದ ಜನರನ್ನು ಸ್ಥಳಾಂತರಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕಟ್ಟಡವು ರೋಗಿಗಳಿಲ್ಲದ ಬ್ಲಾಕ್ ಆಗಿದ್ದು, ವೈದ್ಯರ ಕೊಠಡಿ ಹಾಗೂ ಸಂಶೋಧನಾ ಪ್ರಯೋಗಾಲಯಗಳನ್ನು ಒಳಗೊಂಡಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಹೊಗೆಯು ಎರಡನೇ ಮಹಡಿ ಸೇರಿದಂತೆ ಕಟ್ಟಡದ ತುಂಬ ಆವರಿಸಿಕೊಂಡಿದೆ. ಆಸ್ಪತ್ರೆಯ ಮೇಲ್ಭಾಗದಿಂದ ದಟ್ಟವಾದ ಹೊಗೆ ಕಂಡು ಬರುತ್ತಿದೆ ಎಂದು ಅಗ್ನಿಶಾಮಕದ ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ.

ಸುಮಾರು 5 ಗಂಟೆ ಹೊತ್ತಿಗೆ ಆಸ್ಪತ್ರೆಯ ಪಿಸಿ ಹಾಗೂ ಬೋಧಕ ವಿಭಾಗದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿರುವ ಕುರಿತು ಕರೆ ಬಂತು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ದೌಡಾಯಿಸಿದೆವು ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸಹ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಬೇರೆ ಕಟ್ಟಡದಲ್ಲಿ ದಾಖಲಾಗಿದ್ದಾರೆ. ಜೇಟ್ಲಿ ಅವರು ಆಗಸ್ಟ್ 9ರಿಂದ ಇನ್ಸೆಂಟಿವ್ ಕೇರ್ ಯುನಿಟ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ದಾಖಲಾಗಿರುವ ಕಟ್ಟಡಕ್ಕೂ ಹಾಗೂ ಬೆಂಕಿ ಹೊತ್ತಿಕೊಂಡಿರುವ ಕಟ್ಟಡಕ್ಕೂ ತುಂಬಾ ಅಂತರವಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *