ಕೋಲಾರ: ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅವರು ಸಂಪುಟ ರಚನೆಯ ಕುರಿತು ಕಸರತ್ತು ನಡೆಸುತ್ತಿದ್ದರೆ ಇತ್ತ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಇಂಧನ ಖಾತೆಯ ಮೇಲೆ ಕಣ್ಣು ಹಾಕಿದ್ದಾರೆ.
ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಇಂಧನ ಖಾತೆಗಾಗಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ರೇವಣ್ಣ ಅವರ ನಡುವೆ ಪೈಪೋಟಿ ನಡೆದಿತ್ತು. ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಈ ಖಾತೆಯನ್ನು ನಾನೇ ನಿಭಾಯಿಸುತ್ತೇನೆ ಎಂದು ಜವಾಬ್ದಾರಿ ತೆಗೆದುಕೊಂಡಿದ್ದರು. ಈಗ ಬಿಜೆಪಿ ಸರ್ಕಾರ ಬಂದ ಮೇಲೂ ಇಂಧನ ಖಾತೆ ಮೇಲೆ ಹಲವು ಮಂದಿ ಕಣ್ಣಿಟ್ಟಿದ್ದಾರೆ. ಅದರಲ್ಲೂ ಪಕ್ಷೇತರ ಶಾಸಕ ನಾಗೇಶ್ ಬಹಿರಂಗವಾಗಿಯೇ ಈ ಖಾತೆ ನೀಡಿದರೆ ಉತ್ತಮವಾಗಿ ಕೆಲಸ ಮಾಡಬಲ್ಲೆ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಬಗ್ಗೆ ನಾಗೇಶ್ ಅವರೇ ಬಾಯಿಬಿಟ್ಟಿದ್ದಾರೆ. ಸಚಿವರಾಗಲು ಎಲ್ಲರಿಗೂ ಆಸೆ ಇರುತ್ತದೆ. ಕಳೆದ ಬಾರಿ ಸಣ್ಣ ಕೈಗಾರಿಕೆ ಸಚಿವನಾಗಿದ್ದೆ. ಈ ಬಾರಿ ಒಳ್ಳೆಯ ಇಲಾಖೆ ಕೊಟ್ಟರೆ ನಿಭಾಯಿಸುವೆ. ಅದರಲ್ಲೂ ಇಂಧನ ಇಲಾಖೆ ಕೊಟ್ಟರೆ ನಿರ್ವಹಿಸುತ್ತೇನೆ. ಎಲ್ಲವೂ ಗೊತ್ತಿರುವುದರಿಂದ ಸುಲಭವಾಗಿ ನಿಭಾಯಿಸಬಲ್ಲೆ ಎಂದು ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ದೇವರು ಒಳ್ಳೆಯ ಶಕ್ತಿ ಕೊಟ್ಟಿದ್ದಾನೆ. ಅದಕ್ಕೆ ಪ್ರವಾಹ ಪರಿಸ್ಥಿತಿ ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತಿದ್ದಾರೆ. ಒಂದು ವಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಇಳಿ ವಯಸ್ಸಿನಲ್ಲೂ ಶಕ್ತಿ ಮೀರಿ ಬಿಎಸ್‍ವೈ ಕೆಲಸಮಾಡುತ್ತಿದ್ದಾರೆ ಎಂದು ಸಿಎಂ ಕಾರ್ಯವೈಖರಿಯನ್ನು ಹೊಗಳಿದರು.
ಈ ಹಿಂದೆ ನನಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗಾಡ್ ಫಾದರ್ ಎಂದಿದ್ದ ನಾಗೇಶ್ ಅವರು, ಈಗ ನೋಡಿಕೊಂಡು ಒಳ್ಳೆಯ ಗಾಡ್ ಫಾದರ್ ಹುಡಕಿಕೊಳ್ತೇನೆ, ನಾನು ಮಾಜಿ ಶಾಸಕ ಮಂಜುನಾಥ್ ಲವ-ಕುಶ ಇದ್ದಂತೆ ಎಂದು ಹೇಳಿದ್ದಾರೆ.
ಮಾಜಿ ಸಂಸದ ಎಚ್. ಮುನಿಯಪ್ಪ ಅವರ ಬಗ್ಗೆ ಪ್ರತಿಕ್ರಿಯಿಸಿ, ಅವರ ಬಗ್ಗೆ ಮಾತನಾಡುವುದು ಅಪ್ರಸ್ತುತ. ನಮ್ಮಂತವರ ಬಗ್ಗೆ ಮಾತನಾಡುವ ಅರ್ಹತೆ ಅವರಿಗೆ ಇಲ್ಲ. ನಮ್ಮ ಬೆಲೆ ಏನು ಅವರ ಬೆಲೆ ಏನು? ಅವರ 20 ವರ್ಷಗಳ ಜಮಾನ ಮುಗೀತು, ಈಗೇನಿದ್ದರು ಅವರು ವಾಚ್ ಮಾಡಬೇಕಷ್ಟೆ ಎಂದು ಸಲಹೆ ನೀಡುತ್ತಲೇ, ಕೈಲಾದ್ರೆ ಮಾಡಬೇಕು ಇಲ್ಲವಾದಲ್ಲಿ ಮನೆಯಲ್ಲಿರುಬೇಕು ಎಂದು ಟಾಂಗ್ ಕೊಟ್ಟರು.