ಚಾಮರಾಜನಗರ: ಕೇರಳದ ವಯನಾಡಿನಲ್ಲಿ ವರುಣನ ಅಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕಳೆದ ಎರಡು ದಿನಗಳಿಂದ ಭಾರೀ ಮಳೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಎರಡು ದಿನಗಳಿಂದ ರಸ್ತೆಯಲ್ಲಿಯೇ ವಾಹನಗಳು ಸಾಲುಗಟ್ಟಿ ನಿಂತುಕೊಂಡಿದ್ದವು. ಆದರೆ ಈಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಇದೀಗ ಮಳೆ ಅಬ್ಬರ ಕೊಂಚ ತಗ್ಗಿರುವ ಕಾರಣಕ್ಕೆ ಭಾರೀ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅವುಗಳನ್ನು ಬಿಟ್ಟು ಇತರೆ ಕಾರು, ಬೈಕ್‍ಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತ ಕಾವೇರಿ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ವೆಸ್ಲಿ ಸೇತುವೆ ಮತ್ತಷ್ಟು ಕುಸಿಯುವ ಹಂತಕ್ಕೆ ಬಂದಿದೆ. ಬ್ರಿಟಿಷರ ಕಾಲದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷದ ಪ್ರವಾಹಕ್ಕೆ ಸಿಲುಕಿ ಈ ಸೇತುವೆ ಕುಸಿದು ಹೋಗಿತ್ತು. ಉಕ್ಕಿ ಹರಿಯುವ ನದಿ ನೀರಿನ ಹೊಡೆತಕ್ಕೆ ಸೇತುವೆ ಮತ್ತಷ್ಟೂ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ನೀರಿನ ಅಬ್ಬರಕ್ಕೆ ಸೇತುವೆ ಕುಸಿದು ಇತಿಹಾಸದ ಪುಟ ಸೇರುತ್ತಾ ಎಂಬ ಆತಂಕ ಜನರಲ್ಲಿ ಮನೆಮಾಡಿದೆ.