ಬೆಂಗಳೂರು: ಮಹಾಮಳೆಯಿಂದ ತತ್ತರಿಸಿರುವ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ಭೇಟಿ ನೀಡಲಿದ್ದಾರೆ.
ನಾಳೆ ಮಧ್ಯಾಹ್ನ 2.30ಕ್ಕೆ ಬೆಳಗಾವಿಗೆ ಅಮಿತ್ ಶಾ ಆಗಮಿಸಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿರುವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಥ್ ನೀಡಲಿದ್ದಾರೆ.
ವೈಮಾನಿಕ ಸಮೀಕ್ಷೆ ಮುಗಿದ ನಂತರ ಅಮಿತ್ ಶಾ ಸಮ್ಮುಖದಲ್ಲೇ ಯಡಿಯೂರಪ್ಪನವರು ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಈ ಸಭೆ ನಾಳೆ ಸಂಜೆ 4.30 ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆಯಲಿದೆ.
ಇದರ ಜೊತೆಗೆ ನಾಳೆ ಸಚಿವ ಸಂಪುಟ ವಿಚಾರದ ಬಗ್ಗೆ ಬಿಎಸ್‍ವೈ ಹಾಗೂ ಅಮಿತ್ ಶಾ ಜೊತೆ ಚರ್ಚೆ ಮಾಡಲಿದ್ದಾರೆ. ರಾಜ್ಯದಲ್ಲಿ ಸಂಪುಟ ರಚನೆಗೆ ಹೈಕಮಾಂಡ್ ಆದೇಶಕ್ಕೆ ಕಾದು ಕುಳಿತಿರುವ ಬಿ.ಎಸ್ ಯಡಿಯೂರಪ್ಪ ಅವರಿಗೆ ನಾಳೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.