– 30 ಜನರ ರಕ್ಷಣೆಗೆ ಮುಂದಾದ ಎನ್‌ಡಿಆರ್‌ಎಫ್
ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಾಮಗಳು ಮುಳುಗಡೆಯಾಗುತ್ತಿವೆ. ಮಲಪ್ರಭಾ ನದಿಯ ಪ್ರವಾಹದಿಂದಾಗಿ ಮನೆಯಲ್ಲಿ ಸಿಲುಕಿರುವ ಏಳು ಮಂದಿ ಯುವಕರಿಗೆ ಪ್ರಾಣ ಸಂಕಟ ಎದುರಾಗಿದೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಖ್ಯಾಡ ಗ್ರಾಮದ ಮನೆಯಲ್ಲಿ ಪ್ರವಾಹಕ್ಕೆ ಸಿಲುಕಿ ಯುವಕರು ನರಳಾಡುತ್ತಿದ್ದಾರೆ. ಮಲಪ್ರಭಾ ನದಿಯ ಭಾರೀ ಪ್ರವಾಹದಿಂದ ಮನೆಗಳು ನಡುಗಡ್ಡೆಯಂತಾಗಿದ್ದು ಮುತ್ತಣ್ಣ, ಶ್ರೀಶೈಲ್, ಈರಣ್ಣ, ಗೌಡಪ್ಪ, ಹನುಮಂತ, ಹನುಮಪ್ಪ, ಬಸಪ್ಪ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ.
ಮನೆಯ ಸುತ್ತ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಹ ಆವರಿಸಿಕೊಂಡಿದ್ದು, ಪ್ರವಾಹದ ಪ್ರಮಾಣ ಅಧಿಕವಾದರೆ ಏಳು ಜನರ ಜೀವಕ್ಕೂ ಅಪಾಯ ಎದುರಾಗಲಿದೆ. ಇಷ್ಟಾದರೂ ಅಧಿಕಾರಿಗಳು ಖ್ಯಾಡ ಗ್ರಾಮಕ್ಕೆ ಭೇಟಿ ನೀಡಿಲ್ಲ. ನಡುಗಡ್ಡೆಯಲ್ಲಿ ಸಿಲುಕಿರುವ ಏಳು ಜನರ ಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಅವರು ಸ್ಪಂದಿಸುತ್ತಿಲ್ಲ. ನಾವು ಎಲ್ಲರನ್ನೂ ರಕ್ಷಿಸಿದ್ದೇವೆ ಎಂದು ಹೇಳಿ ಬದಾಮಿ ತಹಶೀಲ್ದಾರ್ ಫೋನ್ ಕಟ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಈ ಏಳು ಯುವಕರನ್ನು ರಕ್ಷಿಸಲು ಇರುವ ಏಕೈಕ ಮಾರ್ಗ ಏರ್ ಲಿಫ್ಟ್. ಇಂದೂ ಪ್ರವಾಹ ಹೆಚ್ಚಾದಲ್ಲಿ ಯುವಕರನ್ನು ರಕ್ಷಿಸುವುದು ಅಸಾಧ್ಯ ಎನ್ನುವಂತಾಗಿದೆ. ತುರ್ತಾಗಿ ರಕ್ಷಣೆ ಮಾಡುವ ಅಗತ್ಯವಿದೆ. ಇಲ್ಲವಾದಲ್ಲಿ ಏಳು ಜನರ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ತಿಳಿದುಬಂದಿದೆ.
ಗುಹೆ ಮೇಲಿನವರ ರಕ್ಷಣೆ
ಪ್ರವಾಹದ ಭೀತಿಯಿಂದ ಬಾಗಲಕೋಟೆಯ ಪಟ್ಟದಕಲ್ಲಿನ ಗುಹೆ ಮೇಲೆ ಕೂಡ 30ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದರು. ಜನರ ರಕ್ಷಣೆಗೆ ಎನ್‌ಡಿಆರ್‌ಎಫ್ ತಂಡ ಮುಂದಾಗಿದ್ದು, ಜಲಾವೃತವಾದ ರಸ್ತೆ ಮಾರ್ಗವಾಗಿ ಬೋಟ್ ಮೂಲಕ ತೆರಳಿ ಜನರ ರಕ್ಷಣೆ ಮಾಡುತ್ತಿದ್ದಾರೆ.
ಬದಾಮಿಯ ನಂದಿಕೇಶ್ವರ ಗ್ರಾಮದಿಂದ ಪಟ್ಟದಕಲ್ಲಿಗೆ ಸಾಗುವ ರಸ್ತೆ ಸುಮಾರು 6 ಕಿ.ಮೀ ವರೆಗೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಪಟ್ಟದಕಲ್ಲಿನ ಗ್ರಾಮ ಸಂಪೂರ್ಣ ಜಲಾವೃತವಾದ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಜನ ಗುಹೆ ಮೇಲೆ ಆಶ್ರಯ ಪಡೆದಿದ್ದಾರೆ. ರಕ್ಷಣೆಗಾಗಿ ಬೋಟ್ ನಲ್ಲಿ ಎನ್‌ಡಿಆರ್‌ಎಫ್ ತಂಡ ತೆರಳಿದೆ. ಹೆಲಿಕಾಪ್ಟರ್ ನಲ್ಲಿ ರಕ್ಷಣೆ ಮಾಡಿ ಬೋಟ್ ಮೂಲಕ ನಂದಿಕೇಶ್ವರ ಗ್ರಾಮದ ಕಡೆ ಸಂತ್ರಸ್ತರನ್ನು ಎನ್‍ಡಿಆರ್‍ಎಫ್ ತಂಡ ಕರೆ ತರಲಿದೆ. ಪಟ್ಟದಕಲ್ಲು, ನಂದಿಕೇಶ್ವರ ಸುತಮುತ್ತ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು ಬೆಳೆಗಳು ನಾಶವಾಗಿವೆ. ಎತ್ತ ನೋಡಿದರೂ ನೀರು ಕಾಣುತ್ತಿದೆ.