ಕೊಡಗಿನಲ್ಲಿ ಕೊಚ್ಚಿಹೋಯ್ತು ನಾಲ್ಕು ಎಕ್ರೆ ಕಾಫಿತೋಟ – ಬಿರುನಾಣಿಯಲ್ಲಿ ಭಾರೀ ಭೂಕುಸಿತ

Public TV
2 Min Read
mdk bhoo kusita

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಈ ನಡುವೆ ವರುಣನ ರೌದ್ರಾವತಾರಕ್ಕೆ ಭೂಕುಸಿತವಾಗಿ ನಾಲ್ಕು ಎಕ್ರೆ ಕಾಫಿತೋಟ ಕೊಚ್ಚಿಹೋಗಿದೆ.

ವಿರಾಜಪೇಟೆ ತಾಲ್ಲೂಕಿನ ಬಿರುನಾಣಿಯಲ್ಲಿ ಭಾರೀ ಭೂಕುಸಿತವಾಗಿದ್ದು, ಕರ್ತಮಾಡಿನ ನಿವಾಸಿ ಸುಜನ್ ಅವರ ಕಾಫಿತೋಟ ಸಂಪೂರ್ಣ ಕೊಚ್ಚಿಹೋಗಿದೆ. ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆ ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ.

mdk bhoo kusita 2

ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣಕ್ಕೆ ಜಿಲ್ಲೆಯ ಹಾರಂಗಿ ಜಲಾಶಯದ ನೀರಿನ ಒಳಹರಿವು ಹೆಚ್ಚುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಆದ್ದರಿಂದ ನದಿ ತಟದಲ್ಲಿರುವ ಸಾರ್ವಜನಿಕರು ಎಚ್ಚರದಿಂದಿರಲು ಜಿಲ್ಲಾಡಳಿತ ಸೂಚಿಸಿದೆ. ಕಾವೇರಿ ನದಿ ನೀರಿನಿಂದ ನಾಪೋಕ್ಲುವಿನ ಹಲವು ಬಡಾವಣೆಗಳಿಗೆ ನೀರು ನುಗ್ಗಿ, 150 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸದ್ಯ ನಿರಾಶ್ರಿತರಿಗೆ ನಾಪೋಕ್ಲಿನ ಕಲ್ಲುಮಟ್ಟೆ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಿಕೊಡಲಾಗಿದೆ. ಆದರೆ ಸ್ಥಳದಲ್ಲಿ ಯಾವುದೇ ಸೌಲಭ್ಯವಿಲ್ಲದೆ ನಿರಾಶ್ರಿತರು ಪರದಾಡುತ್ತಿದ್ದಾರೆ. ಅಲ್ಲದೆ ತಕ್ಷಣವೇ ಸೌಲಭ್ಯ ಕಲ್ಪಿಸಿಕೊಡಿ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

mdk bhoo kusita 1

ಇತ್ತ ಮಡಿಕೇರಿ ತಾಲೂಕಿನ ಭೇತ್ರಿ ಹೊಳೆ ಉಕ್ಕಿ ಹರಿಯುತ್ತಿರುವ ಪರಿಣಾಮ ಮಡಿಕೇರಿ ವಿರಾಜಪೇಟೆ ಸಂಪರ್ಕ ರಸ್ತೆ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಕಳೆದ ಬಾರಿಯಂತೆ ಈ ವರ್ಷವೂ ಕುಶಾಲನಗರ ಮತ್ತೆ ಮುಳುಗುವ ಭೀತಿಯಲ್ಲಿದೆ. ಕುಶಾಲನಗರ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಗಳು ಕಳೆದ ಬಾರಿ ಮುಳುಗಡೆಯಾಗಿತ್ತು. ಸದ್ಯ ಕುಶಾಲನಗರದ ತಗ್ಗು ಪ್ರದೇಶಗಳಿಗೆ ನೀರು ಹರಿದಿದೆ. ಇದರಿಂದ ಇಲ್ಲಿನ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ.

ಜಿಲ್ಲಾಡಳಿತದಿಂದ ಕುಶಾಲನಗರದಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರಯಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಅನೀಸ್ ಎಪಿ ಸುಮಾನ್ ಪನ್ನೇಕರ್ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತ್ತ ಕಾವೇರಿ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅವಾಂತರ ಸೃಷ್ಟಿಯಾಗಿದೆ. ಗೋಣಿಕೊಪ್ಪದ ಹರಿಶ್ಚಂದ್ರಪುರದ ಬಡಾವಣೆಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿದೆ.

mdk bhoo kusita 3

ವರುಣನ ಆರ್ಭಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡು, ಮೊಬೈಲ್ ನೆಟ್‍ವರ್ಕ್ ಸರಿಯಾಗಿ ಸಿಗದ ಕಾರಣಕ್ಕೆ ಕೊಡಗಿನ ಸೂರ್ಲಬ್ಬಿ, ಕಿಕ್ಕರಳ್ಳಿ, ಗರ್ವಾಲೆ, ಹಮ್ಮಿಯಾಲ, ಮುಟ್ಲು ಗ್ರಾಮಗಳಲ್ಲಿ ಕತ್ತಲಲ್ಲಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

ಕುಟ್ಟಾ-ಕೇರಳ ರಸ್ತೆಯಲ್ಲಿ ಮರ ಬಿದ್ದ ಹಿನ್ನೆಲೆ ಕೊಡಗು-ಕೇರಳ ಅಂತರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ಬಸ್ಸುಗಳನ್ನು ನಿಲ್ಲಿಸಲಾಗಿದೆ. 5 ದಿನಗಳ ಹಿಂದೆ ಮಾಕುಟ್ಟ ರಸ್ತೆ ಕುಸಿತವಾಗಿ ಕೇರಳದ ಒಂದು ಮಾರ್ಗ ಬಂದ್ ಆಗಿತ್ತು, ಇಂದು ಮರ ಬಿದ್ದ ಪರಿಣಾಮ ಕುಟ್ಟ ಮಾರ್ಗ ಕೂಡ ಬಂದ್ ಆಗಿದೆ. ಪರಿಣಾಮ ಕೇರಳಕ್ಕೆ ತೆರಳುವ ವಾಹನ ಸವಾರರು ಪರದಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *