ಗದಗ: ನಾನು ಮಾತ್ರ ಈ ಮನೆಯನ್ನು ಬಿಟ್ಟು ಬರಲ್ಲ. ನೀರು ಬೇಕಾದ್ರೆ ಬರಲಿ ನಾನು ಇದೇ ಮನೆಯಲ್ಲಿ ಸಾಯುತ್ತೇನೆ ಎಂದು ಪ್ರವಾಹ ಪೀಡಿತ ಗ್ರಾಮದ ಅಜ್ಜಿಯೊಬ್ಬರು ಹಠ ಹಿಡಿದಿದ್ದಾರೆ.
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಗದಗ ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನ 13 ಗ್ರಾಮಗಳು ಜಲಾವೃತಗೊಂಡಿವೆ. ಕೊಣ್ಣೂರು, ವಾಸನ, ಲಖಮಾಪೂರ, ಬೂದಿಹಾಳ ಸೇರಿದಂತೆ ನದಿಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ. ನರಗುಂದ ತಾಲೂಕಿನ ವಾಸನ ಗ್ರಾಮದ ನಿವಾಸಿ ಗಂಗಮ್ಮ ಅಜ್ಜಿ ಮಾತ್ರ ಮನೆಯ ತೊರೆಯಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಸ್ಥರು, ಕುಟುಂಬಸ್ಥರು ಸೇರಿದಂತೆ ಹಲವರು ಅಜ್ಜಿಯ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಂಗಮ್ಮ ಅಜ್ಜಿ, ನೀರು ಬಂದರೆ ಬರಲಿ ನಾನು ಮಾತ್ರ ಈ ಮನೆಯನ್ನು ತೊರೆಯಲ್ಲ. ಬೇರೆ ಸ್ಥಳದಲ್ಲಿರಲು ನನ್ನಿಂದ ಸಾಧ್ಯನೇ ಇಲ್ಲ. ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ, ಮಾಡಿದ್ರೆ ಹೋಗಬಹುದಿತ್ತು. ಕಾಸಿಗೆ ಕಾಸು ಸೇರಿಸಿ ಮನೆ, ಎತ್ತುಗಳನ್ನು ಮಾಡಿಕೊಂಡಿದ್ದೇನೆ. ಇಂದು ದಿಢೀರ್ ಎಂದು ಮನೆ ಖಾಲಿ ಮಾಡಲು ಆಗಲ್ಲ. ನನ್ನ ಮಕ್ಕಳು, ಸೊಸೆ, ಮೊಮ್ಮಕಳು ಬೇಕಾದ್ರೆ ತಮ್ಮ ಬಟ್ಟೆ ತೆಗೆದುಕೊಂಡು ಹೊಗಬಹುದು. ಈ ಮನೆಯನ್ನು ತೊರೆದು ಗಂಜಿ ಕೇಂದ್ರದಲ್ಲಿರಲು ನಾನು ಸಿದ್ಧಳಿಲ್ಲ ಎಂದು ತಮ್ಮ ನಿರ್ಧಾರವನ್ನು ತಿಳಿಸಿದರು.
ಗ್ರಾಮವೇ ಜಲಾವೃತಗೊಂಡಿದ್ದು, ಇನ್ನು ಬೇಕಾದ್ರೆ ನೀರು ಬಿಡಲಿ ನಾನು ಭಯಪಡಲ್ಲ. ನೀರು ಬೇಕಾದಾಗ ಬಿಡಲಿಲ್ಲ. ಇವಾಗ ಇಷ್ಟು ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ. ಆ ನೀರಿನಲ್ಲಿ ತೇಲಿಕೊಂಡು ಹೋಗುತ್ತೇನೆ ಹೊರತು ಮನೆ ತೊರೆಯಲ್ಲ. ನನ್ನ ಹೆಸರು ಗಂಗಮ್ಮ, ಗಂಗೆಯಲ್ಲಿ ತೇಲಿಕೊಂಡು ಹೋಗುತ್ತೇನೆ ಎಂದರು.