ಗೌಡ್ರ ಕುಟುಂಬಕ್ಕೆ, ಜೆಡಿಎಸ್‍ಗೆ ವಿಶ್ವನಾಥ್ ಎಂಬ ಕಾರ್ಕೋಟಕ ವಿಷ ಹಾಕಿದ್ದು ನಾನೇ- ಸಾ.ರಾ ಮಹೇಶ್

Public TV
2 Min Read
SARA MAHESH

ಮೈಸೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಹಾಗೂ ಜನತಾ ದಳಕ್ಕೆ ವಿಷ ಹಾಕಿದ್ದು ನಾನೇ. ಆ ಕಾರ್ಕೋಟಕ ವಿಷದ ಹೆಸರು ವಿಶ್ವನಾಥ್ ಎಂದು ಹೇಳುವ ಮೂಲಕ ಅನರ್ಹ ಶಾಸಕ ಎಚ್. ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಸಾ.ರಾ ಮಹೇಶ್ ಕೆಂಡಾಮಂಡಲವಾಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಅವರನ್ನು ನಾನು ಜೆಡಿಎಸ್‍ಗೆ ಕರೆ ತಂದು ನಮ್ಮ ಪಕ್ಷಕ್ಕೆ ವಿಷ ಹಾಕಿದೆ. ಸದನದಲ್ಲಿ ನಾನು ಅವರ ವಿರುದ್ಧ ಮಾತಾಡಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ಅವರ ಜೊತೆ ಚರ್ಚೆಗೆ ಬರಲು, ದೇವಸ್ಥಾನಕ್ಕೆ ಹೋಗಲು ನಾನು ಸದಾ ಸಿದ್ಧ. ಅವರ ಜೊತೆಯೇ ಕೂತು ಅವರ ಇನ್ನಷ್ಟು ಚರಿತ್ರೆ ಬಿಚ್ಚಿಡುತ್ತೇನೆ. ಕ್ಷೇತ್ರದ ಜನರ ಸಮಸ್ಯೆ ಪರಿಹರಿಸಿ ಕೊಡಿ ಎಂದು ವಿಶ್ವನಾಥ್, ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಳಿ ಕೇಳಿದರೋ, ಇಲ್ಲವೋ ಅವರ ವೈಯಕ್ತಿಕ ಸಮಸ್ಯೆ ಬಗೆಹರಿಸಿ ಕೊಡಲು ಕೇಳಿದರೋ ಎಂಬುದರ ಕುರಿತು ಸಹ ಹೇಳುತ್ತೇನೆ ಎಂದು ಎಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದರು.

sara mahesh vishwanath

ಹಳ್ಳಿ ಹಕ್ಕಿ ಒಂದೊಂದು ಋತುವಿನಲ್ಲಿ ಒಂದೊಂದು ಗೂಡು ಸೇರುತ್ತದೆ. ಒಂದು ಋತುವಿನಲ್ಲಿ ವಲಸೆ ಹೋಗುತ್ತದೆ. ಲಾಭ ಎಲ್ಲಿರುತ್ತೋ ಅಲ್ಲಿಗೆ ಹಕ್ಕಿಗಳು ವಲಸೆ ಹೊಗುತ್ತವೆ. ಎಚ್.ವಿಶ್ವನಾಥ್ ಕೂಡ ಅದೇ ರೀತಿ. ನನ್ನನ್ನು ಒಬ್ಬ ಶಾಸಕನನ್ನಾಗಿ ಮಾಡಿ ಸಾಕು ಎಂದು ನಮ್ಮ ಬಳಿ ಕೇಳಿದ್ದರು. ಈಗ ನಮ್ಮ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿದರು.

ವಿಶ್ವನಾಥ್ ಗೆ ಸವಾಲು:
ನಾನು ರಿಯಲ್ ಎಸ್ಟೇಟ್ ಮಾಡುತ್ತೇನೆ. ಆದರೆ ವರ್ಗಾವಣೆಯಲ್ಲಿ ಹಣ ಮಾಡಿಲ್ಲ. ರಾಹುಲ್ ಗಾಂಧಿ ಅವರ ಸಭೆಗೆ ಆಗಮಿಸುವಂತೆ ವಿಶ್ವನಾಥ್ ಅವರನ್ನು ನಾನೇ ಕರೆದೆ. ಆಗ ನಾನು ಸಿದ್ದರಾಮಯ್ಯ ಇರುವ ಸಭೆಗೆ ಬರುವುದಿಲ್ಲ ಎಂದು ವಿಶ್ವನಾಥ್ ಅವರೇ ಹೇಳಿದ್ದರು. ಅಲ್ಲದೆ, ವಿಶ್ವನಾಥ್ ಅವರು ತಾವು ಯಾವುದೇ ಆಸೆ, ಆಮೀಷಕ್ಕೆ ಬಲಿ ಆಗಲಿಲ್ಲ ಎಂದು ತಾಯಿ ಚಾಮುಂಡಿ ಮುಂದೆ ಪ್ರಮಾಣ ಮಾಡಲಿ. ನೀವು ಯಾವುದೇ ಆಮೀಷಕ್ಕೊಳಗಾಗಿ ರಾಜೀನಾಮೆ ನೀಡಿಲ್ಲ ಎಂದಾದರೆ, ನಾನು ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಾರ್ವಜನಿಕ ಜೀವನದಿಂದ ದೂರ ಸರಿಯುತ್ತೇನೆ ಎಂದು ಸಾ.ರಾ.ಮಹೇಶ್ ಅವರು ವಿಶ್ವನಾಥ್ ಅವರಿಗೆ ಸವಾಲು ಹಾಕಿದರು.

siddu vishwanath

ವಿಶ್ವನಾಥ್ ರಾಜಕಾರಣದ ವ್ಯಭಿಚಾರಿ, ಆಮೀಷಕ್ಕೊಳಗಾಗಿ ಪಕ್ಷ ಬದಲಿಸುವುದು ರಾಜಕಾರಣದ ವ್ಯಭಿಚಾರ, ರಿಯಲ್ ಎಸ್ಟೇಟ್ ನನ್ನ ವ್ಯವಹಾರ, ಅದು ನನ್ನ ಬದುಕು. ಇದು ಧರ್ಮ-ಅಧರ್ಮದ ನಡುವೆ ನಡೆಯುತ್ತಿರುವ ವಾಗ್ವಾದ. ನಮ್ಮ ಪಕ್ಷದವರೇ ನನಗೆ ವಿರೋಧ ಮಾಡಿದರೂ ಕೆ.ಆರ್ ನಗರ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿದರು. ದೇವೇಗೌಡರಿಗೆ, ಜೆಡಿಎಸ್‍ಗೆ ವಿಷ ಹಾಕಿದವರು ಬಹಳ ಜನ ಇದ್ದಾರೆ. ಅದನ್ನೆಲ್ಲ ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮ ನಾಯಕರಿಗೆ, ಪಕ್ಷಕ್ಕೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

HDK SIDDU

ಇತ್ತೀಚೆಗಷ್ಟೇ ಮೈಸೂರಿನಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ, ಮೈತ್ರಿ ಸರ್ಕಾರ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಸುದ್ದಿಗೋಷ್ಠಿಯನಡೆಸಿ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *