ವಾಷಿಂಗ್ಟನ್: ಅಮೆರಿಕಾದ ಮತ್ತೊಂದು ಸಾಮೂಹಿಕ ಶೂಟೌಟ್ ನಡೆದಿದ್ದು, ಓಹಿಯೋ ರಾಜ್ಯದಲ್ಲಿ ನಡೆದ ಘಟನೆಯಲ್ಲಿ ಸುಮಾರು 10 ಜನ ಸಾವನ್ನಪ್ಪಿದ್ದಾರೆ.
ಮೊದಲ ಶೂಟೌಟ್ ಟೆಕ್ಸಾಸ್ ಪ್ರಾಂತ್ಯದಲ್ಲಿ ನಡೆದಿತ್ತು. ಆದರಲ್ಲಿ 20 ಮಂದಿ ಸಾವನ್ನಪ್ಪಿದ್ದರು. ಈಗ ಮತ್ತೆ ಆದೇ ರೀತಿಯಲ್ಲಿ ಓಹಿಯೋದ ಡೇಟನ್ ಎಂಬ ಪ್ರದೇಶದಲ್ಲಿ ಇಂದು ಮುಂಜಾನೆ ಶೂಟೌಟ್ ನಡೆದಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ನೈಟ್ ಲೈಫ್ ಎಂಬ ನಗರದ ಜನಪ್ರಿಯ ಬಾರ್‍ವೊಂದರಲ್ಲಿ ನಡೆದಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಲೆಫ್ಟಿನೆಂಟ್ ಕರ್ನಲ್ ಮ್ಯಾಟ್ ಕಾರ್ಪರ್ ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಬಾರ್‍ನಲ್ಲಿ ಒಬ್ಬ ಶೂಟರ್ ಮಾತ್ರ ಇದ್ದ. ಅವನಿಗೆ ನಮ್ಮ ಪೊಲೀಸ್ ಅಧಿಕಾರಿಗಳು ಗುಂಡು ಹೊಡೆದಿದ್ದಾರೆ ಅವನು ಗಾಯಗೊಂಡಿದ್ದಾನೆ. ಈ ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ಯಾವ ಪೊಲೀಸ್ ಅಧಿಕಾರಿಗಳು ಗಾಯಗೊಂಡಿಲ್ಲ. ಇದು ಇಂದು ಅಮೆರಿಕದಲ್ಲಿ ನಡೆದ ಎರಡನೇ ಘಟನೆ ಎಂದು ಹೇಳಿದ್ದಾರೆ.
ಶೂಟರ್ ಬೀದಿಯಲ್ಲಿ ನಿಂತುಕೊಂಡು ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ಘಟನೆಯಲ್ಲಿ 10 ಜನರು ಮೃತಪಟ್ಟಿದ್ದಾರೆ, 16 ಮಂದಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಆರೋಪಿಯನ್ನು ಕಂಡು ಹಿಡಿಯಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಇದಕ್ಕೂ ಮುನ್ನ ಟೆಕ್ಸಾಸ್ ಪ್ರಾಂತ್ಯದ ಶಾಪಿಂಗ್ ಮಾಲ್ ನಲ್ಲಿ ಶೂಟೌಟ್ ನಡೆದಿದ್ದು, ಘಟನೆಯಲ್ಲಿ 20 ಜನರು ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದರು. ಸ್ಥಳೀಯ ಮಾಧ್ಯಮವೊಂದು ಶಾಪಿಂಗ್ ಮಾಲ್‍ನಲ್ಲಿದ್ದ 18 ಜನರಿಗೆ ಗುಂಡು ತಗುಲಿದೆ ಎಂದು ವರದಿ ಬಿತ್ತರಿಸಿದೆ. ಆದರೆ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದರ ಕುರಿತ ಮಾಹಿತಿಯನ್ನು ನೀಡಿಲ್ಲ.
Terrible shootings in ElPaso, Texas. Reports are very bad, many killed. Working with State and Local authorities, and Law Enforcement. Spoke to Governor to pledge total support of Federal Government. God be with you all!
— Donald J. Trump (@realDonaldTrump) August 3, 2019
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೆಕ್ಸಾಸ್ ನಲ್ಲಿ ನಡೆದ ಘಟನೆ ನೋವುಂಟು ಮಾಡಿದೆ. ಗುಂಡಿನ ದಾಳಿಯಲ್ಲಿ ಹಲವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ಟೆಕ್ಸಾಸ್ ಗವರ್ನರ್ ಜೊತೆ ಮಾತನಾಡಿದ್ದೇನೆ. ಫೆಡರಲ್ ಸರ್ಕಾರ ನಿಮ್ಮ ಸಹಾಯ ಮಾಡಲಿದ್ದು, ದೇವರು ನಿಮ್ಮೊಂದಿಗಿದ್ದಾನೆ ಎಂದು ಹೇಳಿದ್ದಾರೆ.