ಬಿಜೆಪಿ ಏನನ್ನೂ ಕಟ್ಟಲ್ಲ, ದಶಕಗಳಿಂದ ಕಟ್ಟಿದ್ದನ್ನು ಕೆಡವುತ್ತಿದೆ: ರಾಹುಲ್ ಗಾಂಧಿ

Public TV
2 Min Read
RAHUL GANDHI

ನವದೆಹಲಿ: ಭಾರತದ ಆರ್ಥಿಕತೆ ಬೆಳವಣಿಗೆಯಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಏನನ್ನೂ ನಿರ್ಮಿಸುವುದಿಲ್ಲ. ಬದಲಿಗೆ ದಶಕಗಳಿಂದ ಉತ್ಸಾಹ ಮತ್ತು ಪರಿಶ್ರಮದಿಂದ ನಿರ್ಮಿಸಿರುವುದನ್ನು ಕೆಡವುತ್ತದೆ ಎಂದು ಟ್ವೀಟ್‍ನಲ್ಲಿ ಕುಟುಕಿದ್ದಾರೆ.

ಪತ್ರಿಕೆಗಳ ವರದಿಗಳ ಹೆಡ್‍ಲೈನ್ ಹಾಕಿ ಮೇಲಿನ ಸಾಲುಗಳನ್ನು ಬರೆದಿದ್ದಾರೆ. ವಿವಿಧ ಪ್ರಮುಖ ಕ್ಷೇತ್ರಗಳಲ್ಲಿನ ದುರ್ಬಲತೆ ಮತ್ತು ಆರ್ಥಿಕತೆಯ ಪ್ರಸ್ತುತ ಸ್ಥಿತಿಗತಿ ಕುರಿತು ತಜ್ಞರ ವ್ಯಾಖ್ಯಾನಗಳ ಹೆಡ್‍ಲೈನ್ ಹಾಕಿದ್ದಾರೆ. ಭಾರತ ಯಾವಾಗ ಆರ್ಥಿಕತೆ ಬೆಳವಣಿಗೆಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡಿತೋ ಆಗಲೇ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಎಂಬ ಹೆಗ್ಗಳಿಕೆಯನ್ನೂ ಕಳೆದುಕೊಂಡಿದೆ. ಭಾರತ ಐದನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದ್ದು, ಈ ಮೂಲಕ ಯುಕೆ ಹಾಗೂ ಫ್ರಾನ್ಸ್ ಆರ್ಥಿಕತೆಯಲ್ಲಿ ನಮಗಿಂತ ಮುಂದೆ ಹೋಗಿವೆ ಎಂದರು.

indian economy

ಗ್ರಾಹಕರ ಬೇಡಿಕೆ ಕಡಿಮೆ ಹಾಗೂ ಕಂಪನಿಗಳಿಗೆ ಸಾಲ ನೀಡುವುದರಲ್ಲಿಯೂ ಕೊರತೆ ಉಂಟಾಗಿದ್ದರಿಂದ ಹಲವಾರು ಪ್ರಮುಖ ವಲಯಗಳು ತೀವ್ರ ಕುಸಿತ ಕಂಡಿವೆ. ಬ್ಯಾಂಕೇತರ ಹಣಕಾಸು ಕಂಪನಿಗಳು ಸಣ್ಣ ಸಂಸ್ಥೆಗಳಿಗೆ ಸಾಲ ನೀಡದ್ದರಿಂದ ಆಟೋ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಹಾಗೂ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳು ಕುಸಿತ ಕಂಡಿವೆ.

ಇತ್ತೀಚೆಗೆ ಕಂಪನಿಯ ಉನ್ನತ ಅಧಿಕಾರಿಗಳು ಆರ್ಥಿಕತೆಯ ಮಂದಗತಿಯ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದಾರೆ. ಅಲ್ಲದೆ, ಬಿಕ್ಕಟ್ಟು ನಿವಾರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Modi A 1

ಭಾರತದ ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತವು ಭಾರತೀಯ ಷೇರು ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದ್ದು, ವಿದೇಶಿ ಬಂಡವಾಳ ಹೂಡಿಕೆದಾರರಿಂದ ಭಾರಿ ಪ್ರಮಾಣದ ಹೂಡಿಕೆಯನ್ನು ನಮ್ಮವರು ಕಳೆದುಕೊಂಡಿದ್ದಾರೆ. ಚೀನಾ ಮತ್ತು ಅಮೆರಿಕಾ ನಡುವಿನ ವ್ಯಾಪಾರದ ಉದ್ವಿಗ್ನತೆಯಂತಹ ಬಾಹ್ಯ ಅಂಶಗಳು ಭಾರತದ ಆರ್ಥಿಕತೆಯ ಬೆಳವಣಿಗೆಯ ಒತ್ತಡವನ್ನು ಹೆಚ್ಚಿಸಿವೆ.

ಎಲ್ ಆಂಡ್ ಟಿ ಅಧ್ಯಕ್ಷ ಎ.ಎಂ.ನಾಯಕ್ ಮತ್ತು ಎಚ್‍ಡಿಎಫ್‍ಸಿ ಅಧ್ಯಕ್ಷ ದೀಪಕ್ ಪಾರೇಖ್‍ರಂತಹ ಉನ್ನತ ಅಧಿಕಾರಿಗಳು ಆರ್ಥಿಕತೆಯ ಕುರಿತು ಪ್ರತಿಕ್ರಿಯಿಸಿ, ಇತ್ತೀಚೆಗೆ ಆರ್ಥಿಕತೆಯು ‘ವಿಪರೀತ ಕುಸಿತ’ಕ್ಕೆ ಸಾಕ್ಷಿಯಾಗುತ್ತಿದ್ದು, ಪರಿಸ್ಥಿತಿ ಸವಾಲಿನದಾಗಿದೆ. ಆದರೆ, ನಿಧಾನಗತಿ ತಾತ್ಕಾಲಿಕವಾಗಿದ್ದು, ಆರ್ಥಿಕತೆ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲಿವೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *