ಯಾದಗಿರಿ: ಜಿಲ್ಲೆಯ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಬಿಡಲಾಗುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.
ದಿನದಿಂದ ದಿನಕ್ಕೆ ನದಿಯ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿ ದಡಕ್ಕೆ ಹೊಂದಿಕೊಂಡಿರುವ ಕೊಳ್ಳೂರು, ಗೂಗಲ್ ಮತ್ತು ನೀಲಕಂಠರಾಯನ ಗಡ್ಡಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಅಪಾಯದ ಮಟ್ಟ ತಲುಪಿವೆ. ಕೊಳ್ಳೂರು ಸೇತುವೆ ಮುಳಗಡೆಯಾಗಲು ಇನ್ನೂ ಕೇವಲ 2 ಅಡಿ ಮಾತ್ರ ಬಾಕಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆಗಳ ಬಳಿ ಪೊಲೀಸ್ ಇಲಾಖೆಯಿಂದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನದಿ ದಡದ ಅಕ್ಕ-ಪಕ್ಕದ ಜಮೀನುಗಳು ಸಂಪೂರ್ಣ ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಒಟ್ಟು 33 tmcಯ ಜಲಾಶಯ ಇದಾಗಿದ್ದು, ಸದ್ಯ 27 tmc ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಆಲಮಟ್ಟಿ ಡ್ಯಾಮಿನಿಂದ 2,15,350 ಕ್ಯೂಸೆಕ್ ನೀರನ್ನು ಬಸವಸಾಗರ ಜಲಾಶಯಕ್ಕೆ ಹರಿಬಿಡಲಾಗುತ್ತಿದೆ.
ಜಲಾಶಯ ಸಂಪೂರ್ಣ ಭರ್ತಿಯಾಗಿ ಅಪಾಯದ ಮಟ್ಟ ತಲುಪಿದೆ. ಹೀಗಾಗಿ ಜಲಾಶಯದ ಒಟ್ಟು 24 ಗೇಟ್‍ಗಳ ಪೈಕಿ 20 ಗೇಟ್ ತೆರೆದು ಕೃಷ್ಣಾ ನದಿಗೆ 2,25,000 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸುವ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆಯಿದೆ.