ಟಿಪ್ಪು ಜಯಂತಿ ಹೆಸರಿನಲ್ಲಿ ಇನ್ನು ಎಷ್ಟು ಹೆಣ ಬೀಳಬೇಕಿತ್ತು- ಈಶ್ವರಪ್ಪ ಪ್ರಶ್ನೆ

Public TV
2 Min Read
eshwarappa

ಶಿವಮೊಗ್ಗ: ಟಿಪ್ಪು ಜಯಂತಿ ಆಚರಣೆ ಹೆಸರಲ್ಲಿ ಇನ್ನು ಎಷ್ಟು ಹೆಣಗಳು ಬೀಳಬೇಕಿತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ದ್ವೇಷದ ರಾಜಕಾರಣದಿಂದಲ್ಲ. ಮುಖ್ಯಮಂತ್ರಿಗಳು ದ್ವೇಷದ ರಾಜಕಾರಣ ಮಾಡದೇ, ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇಲ್ಲವಾದಲ್ಲಿ ಟಿಪ್ಪು ಜಯಂತಿ ಆಚರಣೆ ಹೆಸರಿನಲ್ಲಿ ಇನ್ನಷ್ಟು ಹೆಣಗಳು ಉರುಳುತ್ತಿದ್ದವು ಎಂದು ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ಸಿಎಂ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Tipu

ಕೇಂದ್ರ ನಾಯಕರ ನಿರ್ದೇಶನದಂತೆ, ಸಂಪುಟ ವಿಸ್ತರಣೆಯಾಗಲಿದೆ. ತೀರ್ಮಾನ ನನ್ನದಲ್ಲ, ಪಕ್ಷದ ತೀರ್ಮಾನದಂತೆ, ನಾನು ಮುನ್ನಡೆಯುತ್ತೇನೆ. ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖಂಡರು ದೆಹಲಿಗೆ ತೆರಳಿ ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಬಳಿ ಚರ್ಚೆ ನಡೆಸಲಿದ್ದಾರೆ. ನಂತರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಅನರ್ಹ ಶಾಸಕರ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ ರಮೇಶ್ ಕುಮಾರ್ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ತಾವೊಬ್ಬ ಸಂವಿಧಾನ ತಜ್ಞರು ಎಂದು ಭಾವಿಸಿಕೊಂಡು ರಮೇಶ್ ಕುಮಾರ್ ಸಂವಿಧಾನಕ್ಕೆ ದ್ರೋಹ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಸಾಮಾನ್ಯ ಜ್ಞಾನ ಇರುವವರಿಗೂ ಅರ್ಥವಾಗುತ್ತದೆ. ಅತೃಪ್ತ ಶಾಸಕರನ್ನು ಅನರ್ಹ ಮಾಡಿ ರಮೇಶ್ ಕುಮಾರ್ ಸಂವಿಧಾನ ಉಳಿಸಿಬಿಟ್ಟರು. ಸಂವಿಧಾನ ಬಲ್ಲವರು ಎಂದು ಸಿದ್ದರಾಮಯ್ಯ ಮತ್ತು ಕೃಷ್ಣ ಬೈರೇಗೌಡ ಅವರು ರಮೇಶ್ ಕುಮಾರ್ ಅವರನ್ನು ವೈಭವಿಕರಿಸುತ್ತಿದ್ದಾರೆ ಎಂದು ಹರಿಹಾಯ್ದರು.

Speaker Ramesh Kumar 2.JPG

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಪಾಯಿಂಟ್ ಆಫ್ ಆರ್ಡರ್ ಮಾಡಿ ಸದನದ ಸಮಯವನ್ನು ಹಾಳು ಮಾಡಿದರು. ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಸಭಾಧ್ಯಕ್ಷ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡರು. ಇವರಿಗೆ ಯಾವುದು ಸರಿಯಾಗುವುದಿಲ್ಲವೋ ಅದು ಸಂವಿಧಾನ ವಿರೋಧಿಯಾಗುತ್ತದೆ. ಯಾವುದು ಇವರ ಪರವಾಗಿರುತ್ತೋ ಅದು ಸಂವಿಧಾನಕ್ಕೂ ಸರಿಯಾಗಿರುತ್ತೆ ಎಂದು ಮೈತ್ರಿ ನಾಯಕರ ವಿರುದ್ಧ ಆರೋಪ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರದ ಆಯಸ್ಸಿನ ಕುರಿತು ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾದಗಲೇ ಹೇಳಿದ್ದೆವು. ಅಲ್ಲದೆ, ಸರ್ಕಾರ ಆರಂಭವಾಗುತ್ತಲೇ, ಕುಮಾರಸ್ವಾಮಿಯವರು, ಬೇರೆ ರೀತಿ ಅಳಲು ಪ್ರಾರಂಭಿಸಿದರು. ಅವರೊಳಗೆ ಯಾವುದೂ ಸರಿ ಇರಲಿಲ್ಲ. ಹೀಗಾಗಿ ಅವರ ಬಣ್ಣ ಲೋಕಸಭೆ ಚುನಾವಣೆ ವೇಳೆ ಬಯಲಾಯಿತು. ಇದೀಗ ಎರಡೂ ಮೈತ್ರಿ ಪಕ್ಷದ ನಾಯಕರು ಪರಸ್ಪರ ಚಾಕು ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.

Reble MLA 1.jpeg

ಅತೃಪ್ತರು ಶಾಸಕರು ಬಿಜೆಪಿಯವರೇ ಮುಂಬೈಗೆ ಕಳುಹಿಸಿದ್ದು ಎಂದು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರೇ ಬಂದು ಹೇಳುತ್ತಾರೆ ಆಗ ತಿಳಿಯಲಿದೆ. ನಮಗೆ ಆಪರೇಷನ್ ಅಗತ್ಯವಿಲ್ಲ. ಆದರೆ, ಬಿಜೆಪಿಗೆ ಸೇರ್ಪಡೆಯಾಗಬೇಕೆಂಬ ಅಭಿಲಾಷೆ ಹಲವರು ಜನರು ಹೊಂದಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *