ಬಾಳೆಹಣ್ಣಿನ ಸಿಪ್ಪೆಯಿಂದ ಆಗುವ ಆರೋಗ್ಯಕರ ಅನುಕೂಲ

Public TV
4 Min Read
BANANA 4

-ಮೊಡವೆ ನಿವಾರಣೆ, ಫಳಫಳ ಹಲ್ಲುಗಳಿಗಾಗಿ ಮದ್ದು ಬಾಳೆ ಸಿಪ್ಪೆ

ಸಾಮಾನ್ಯವಾಗಿ ನಾವು ಬಳಸಿದ ಪ್ರತಿಯೊಂದು ವಸ್ತುವೂ ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಉಪಯೋಗಕ್ಕೆ ಬರುತ್ತವೆ. ಅದರಲ್ಲೂ ನಾವು ಬಳಸುವ ಹಣ್ಣುಗಳಂತೂ ತುಂಬಾ ಉಪಯೋಗಕ್ಕೆ ಬರುತ್ತವೆ. ಆದರೆ ಅದರಿಂದ ಆಗುವ ಅನುಕೂಲಗಳನ್ನು ತಿಳಿಯದೆ ನಾವು ಉಪಯೋಗವಾಗುವ ವಸ್ತು ಅಥವಾ ಹಣ್ಣುಗಳನ್ನು ಬಿಸಾಕುತ್ತೇವೆ. ಅದೇ ರೀತಿ ಎಲ್ಲರೂ ಮನೆಯಲ್ಲಿ ಬಾಳೆ ಹಣ್ಣು ಇದ್ದೆ ಇರುತ್ತದೆ. ಊಟ ಆದ ಮೇಲೆ ತಿಂದು ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಬಾಳೆಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ. ಇದನ್ನು ಕೆಲವೊಂದು ಅಧ್ಯಯನಗಳು ಹೇಳುತ್ತವೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರವಾಗಿದೆ.

ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇರುತ್ತದೆ. ಅಷ್ಟೇ ಅಲ್ಲದೇ ಮೆಗ್ನಿಷಿಯಂ, ಪೊಟ್ಯಾಶಿಯಂ, ನಾರಿನಾಂಶ ಮತ್ತು ಪ್ರೋಟಿನ್ ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ಆದ್ದರಿಂದ ಬಾಳೆ ಹಣ್ಣಿನ ಸಿಪ್ಪೆಯಿಂದ ಏನೆಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

BANANA 2

1. ಹೊಳೆಯುವ ಹಲ್ಲುಗಳಿಗಾಗಿ: ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಎರಡರಿಂದ ಮೂರು ನಿಮಿಷದ ತನಕ ಹಲ್ಲುಗಳ ಮೇಲೆ ಉಜ್ಜಿ. ಆಮೇಲೆ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ನಿಮ್ಮ ಹಲ್ಲುಗಳನ್ನು ತೊಳೆಯಿರಿ. ಇದರಿಂದ ನಿಮ್ಮ ಹಲ್ಲುಗಳಿಗೆ ಫಳ ಫಳ ಎನ್ನುವ ಹೊಳಪು ದೊರೆಯುತ್ತದೆ.

2. ಮೊಡವೆಯ ಸಮಸ್ಯೆ ಪರಿಹಾರ: ಸಾಮಾನ್ಯವಾಗಿ ಯುವತಿ ಮತ್ತು ಯುವಕರಿಗೆ ಮೊಡವೆಗಳ ಸಮಸ್ಯೆ ಇರುತ್ತದೆ. ಹೀಗಾಗಿ ಮೊಡವೆಗಳು ಉಂಟಾದಾಗ ಬಾಳೆಹಣ್ಣಿನ ಸಿಪ್ಪೆಯ ಚಿಕ್ಕ ತುಂಡನ್ನು ತೆಗೆದುಕೊಂಡು ನಿಮ್ಮ ಮುಖದಲ್ಲಿ ಮೊಡವೆ ಇರುವ ಜಾಗದ ಮೇಲೆ ಸ್ವಲ್ಪ ಹೊತ್ತು ನಿಧಾನವಾಗಿ ಮಸಾಜ್ ಮಾಡಿ. ಅದನ್ನು ಹಾಗೆಯೇ 10 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಆಮೇಲೆ ಶುದ್ಧವಾದ ನೀರಿನಿಂದ ಮುಖವನ್ನು ತೊಳೆಯಿರಿ. ಒಂದು ವಾರ ಹೀಗೆ ಮಾಡುತ್ತಿದ್ದರೆ ಮುಖದಲ್ಲಿರುವ ಮೊಡವೆ ನಿಧಾನಕ್ಕೆ ಹೋಗುತ್ತವೆ.

3. ಆರೋಗ್ಯಕರವಾದ ಚರ್ಮಕ್ಕೆ: ಒಂದು ತಾಜಾವಾದ ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಒಂದು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ. ನಂತರ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ಐದು ನಿಮಿಷ ಬಿಟ್ಟು, ನೀರಿನಿಂದ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ದಿನ ಹೀಗೆ ಮಾಡಿ. ಇದು ನಿಮ್ಮ ಮುಖದ ನೆರಿಗೆಯನ್ನು ಕಡಿಮೆ ಮಾಡುವುದಲ್ಲದೇ, ಕಾಂತಿಯನ್ನು ಹೆಚ್ಚಿಸುತ್ತದೆ.

BANANA 64

4. ಚರ್ಮದ ಗಂಟು ನಿವಾರಣೆ: ನಿಮಗೆ ಚರ್ಮದ ಗಂಟಿನಿಂದ ಯಾವುದೇ ಸಮಸ್ಯೆಯಾಗುತ್ತಾ ಇದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಇದನ್ನು ನಿವಾರಣೆ ಮಾಡಬಹುದು. ಭಾದಿತ ಜಾಗದಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಳ್ಳಿ ಮತ್ತು ಇದು ಬೇಗನೆ ನಿವಾರಣೆಯಾಗುವುದು. ಬಾಳೆಹಣ್ಣಿನಲ್ಲಿ ನೋವುನಿವಾರಕ ಗುಣಗಳು ಇವೆ. ಹೀಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ನೋಯುತ್ತಿರುವ ಮಚ್ಚೆಗೆ ಉಜ್ಜಿದರೆ ನೋವು ಕಡಿಮೆಯಾಗುವುದು.

5. ಕಪ್ಪುಕಲೆ ನಿವಾರಣೆ: ಒಂದು ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರು ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಒಂದು ಚಮಚ ಜೇನುತುಪ್ಪು, ಅರ್ಧಚಮಚ ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಕಲೆ ರಹಿತ ಮುಖ ನಿಮ್ಮದಾಗುತ್ತದೆ.

6. ತ್ವಚೆಗಾಗಿ: ಒಂದು ಬಾಳೆಹಣ್ಣಿನ ಸಿಪ್ಪೆ ಮತ್ತು ಮೂರು ಚಮಚ ಲಿಂಬೆ ರಸವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಕಳೆದ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಚರ್ಮದಲ್ಲಿ ಬದಲಾವಣೆ ಬರಲು ನೀವು ಇದನ್ನು ದಿನನಿತ್ಯ ಬಳಸಿಕೊಳ್ಳಬಹುದು.

BANANA 1

7. ಎಣ್ಣೆಯುಕ್ತ ಚರ್ಮಕ್ಕೆ: ಕೆಲವರಿಗೆ ಚರ್ಮವು ಎಣ್ಣೆಯಾಗಿರುತ್ತದೆ. ಅವರು ಮಿಕ್ಸಿಯಲ್ಲಿ ಬಾಳೆಹಣ್ಣಿನ ಸಿಪ್ಪೆ ರುಬ್ಬಿಕೊಳ್ಳಿ. ನಂತರ ರುಬ್ಬಿಕೊಂಡಿರುವ ಬಾಳೆಹಣ್ಣಿನ ಸಿಪ್ಪೆಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ. ಇದು ತುಂಬಾ ಒಣಗಿದಂತೆ ಇರುತ್ತದೆ. ಆಗ ಇದಕ್ಕೆ ನಿಮಗೆ ಬೇಕಾದಷ್ಟು ನೀರು ಹಾಕಿಕೊಳ್ಳಿ. ಇದನ್ನು ಮುಖ ಹಾಗೂ ಚರ್ಮಕ್ಕೆ ಹಚ್ಚಿಕೊಳ್ಳಿ. ತಣ್ಣೀರಿನಿಂದ ತೊಳೆಯಿರಿ. ಇದರಿಂದ ಎಣ್ಣೆಯುಕ್ತ ಚರ್ಮ ನಿವಾರಣೆಯಾಗುತ್ತದೆ.

8. ತೂಕ ಇಳಿಕೆ: ಬಾಳೆಹಣ್ಣಿನ ಸಿಪ್ಪೆಯನ್ನು ತೂಕ ಕಳೆದುಕೊಳ್ಳಲು ಬಳಸಬಹುದು. ಪ್ರತಿ ದಿನ ಎರಡು ಬಾಳೆಹಣ್ಣುಗಳನ್ನು ಮಧ್ಯಾಹ್ನದ ಊಟದ ವೇಳೆ ಸೇವಿಸಿ. ಇದರ ಸಿಪ್ಪೆಗಳನ್ನು ಪ್ರತ್ಯೇಕವಾಗಿ ಸೇವಿಸಿ. ರಾತ್ರಿ ವೇಳೆ ಊಟ ಮಾಡಬೇಡಿ. ಯಾಕೆಂದರೆ ಬಾಳೆಹಣ್ಣಿನ ಸಿಪ್ಪೆಯು ಸರಿಯಾಗಿ ಕರಗಬೇಕು. ಅಧ್ಯಯನಗಳ ಪ್ರಕಾರ ಈ ಆಹಾರ ಕ್ರಮದಿಂದ ಸುಮಾರು 2.5 ಕೆಜಿಯಷ್ಟು ತೂಕ ಕಳೆದುಕೊಳ್ಳಬಹುದು.

9. ಕೀಟಗಳ ಕಡಿತಕ್ಕೆ: ಯಾವುದೇ ಕೀಟಗಳು ಕಚ್ಚಿದರೆ ಆ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಳ್ಳಿ. ಇದರಿಂದ ತುರಿಕೆ ಮತ್ತು ನೋವುಗಳು ತಕ್ಷಣ ನಿವಾರಣೆಯಾಗುತ್ತದೆ.

10. ಕಣ್ಣಿನ ರಕ್ಷಣೆ: ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಸುತ್ತ ಲೇಪಿಸುವುದರಿಂದ ಯು.ವಿ.ಕಿರಣಗಳಿಂದ ರಕ್ಷಣೆ ಪಡೆಯಬಹುದು. ಹೀಗೆ ಮಾಡುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಬಿಡಿ, ನಂತರ ಹಚ್ಚಿ. ಹೀಗೆ ಮಾಡುವುದರಿಂದ ಕಣ್ಣಿನ ಪೊರೆ ಬರದಂತೆ ಸಹ ತಡೆಯಬಹುದು.

11. ಹೊಳಪಿಗಾಗಿ: ಶೂ, ಚರ್ಮದ ಉತ್ಪನ್ನ ಮತ್ತು ಬೆಳ್ಳಿಯ ವಸ್ತುಗಳಿಗೆ ತಕ್ಷಣ ಹೊಳಪು ನೀಡಲು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಬಹುದು. ಇದಕ್ಕಾಗಿ ಸಿಪ್ಪೆಯನ್ನು ಅವುಗಳ ಮೇಲೆ ಉಜ್ಜಿದರೆ ಹೊಳಪು ಬರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *