ಮಡಿಕೇರಿ: ಕೊಡಗಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮಡಿಕೇರಿ ಕುಶಾಲನಗರ, ಸೋಮವಾರಪೇಟೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಬಿಸಿಲಿನ ವಾತಾವರಣ ಬೆಳಗ್ಗೆಯಿಂದಲೂ ಕಂಡು ಬರುತ್ತಿದೆ. ಉಳಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಮತ್ತು ಬಿಸಿಲಿನ ಮಧ್ಯೆ ಕಣ್ಣಾಮುಚ್ಚಾಲೆ ಆಟ ಕಂಡುಬರುತ್ತಿದೆ.
ಮಡಿಕೇರಿಯಲ್ಲೂ ಆಗಾಗ ಬಿಸಿಲು ಬರುತ್ತಿದ್ದರೂ, ಮೋಡ ಕವಿದ ವಾತಾವರಣ ಮುಂದುವರಿದಿದೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಬೀಳುವ ಭಾಗಮಂಡಲದಲ್ಲೂ ವರುಣನ ಸುಳಿವೇ ಇಲ್ಲದ ರೀತಿಯಲ್ಲಿ ಇದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಗೆ ಒಳಹರಿವು ಇಳಿಮುಖವಾಗಿದ್ದು, ಅಣೆಕಟ್ಟೆ ಭರ್ತಿ ಆಗಲು ಇನ್ನೂ 23 ಅಡಿಗಳಷ್ಟು ನೀರು ಬೇಕಿದೆ.
ಕಳೆದ ವಾರದ ಮಳೆಗೆ ಮೈದುಂಬಿಸಿಕೊಂಡಿದ್ದ ಕಾವೇರಿ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಇಳಿಮುಖವಾಗುತ್ತಿದೆ. ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ಭಾಗಮಂಡಲ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಕೆಳಕ್ಕೆ ಬಂದಿದೆ.
ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗಳ ರೈತರಿಗೆ ವರದಾನ ಎಂಬಂತಿರುವ ಹಾರಂಗಿಯಲ್ಲಿ ಈ ವರ್ಷ ಈ ಪ್ರಮಾಣದಲ್ಲಿ ನೀರಿನ ಸಂಗ್ರಹ ಆಗದೇ ಇರುವುದು ಅಚ್ಚುಕಟ್ಟು ವ್ಯಾಪ್ತಿಯ ರೈತರ ಆತಂಕಕ್ಕೆ ಕಾರಣವಾಗಿದೆ. ಈ ಜಲಾಶಯದ ನೀರನ್ನು ಬಳಸಿಕೊಂಡು ಭತ್ತ ಬೆಳೆಯುತ್ತಿದ್ದ ರೈತರು ಇಷ್ಟೊತ್ತಿಗಾಗಲೇ ಗದ್ದೆಯನ್ನು ಸಿದ್ಧಗೊಳಿಸಿ ಸಸಿಮಡಿ ತಯಾರಿ ಮಾಡಿಕೊಳ್ಳಬೇಕಿತ್ತು. ಆದರೆ ಅಣೆಕಟ್ಟೆಯಿಂದ ನೀರು ಸಿಗುವ ಸಾಧ್ಯತೆ ಕಡಿಮೆ ಇರುವುದು ರೈತರ ಚಿಂತೆಗೆ ಕಾರಣವಾಗಿದೆ.