– ಹಾಲಿನ ಬದಲು ಜನರಿಗೆ ವಿಷ ನೀಡಿದ್ರು
– ದಿನಕ್ಕೆ 19 ಲಕ್ಷ ಲೀಟರ್ ಕೃತಕ ಹಾಲು
ನವದೆಹಲಿ: ಮೋಸದಲ್ಲಿ ಮಹಾಮೋಸ ಎಂದರೆ ಇದೇ ಇರಬೇಕು. ಶಾಂಪೂ ಬಳಸಿ ಹಾಲು ಮಾಡ್ತಾರಾ..? ನಾವೆಲ್ಲಾ ಗೊಬ್ಬರವಾಗಿ ಬಳಸುವ ಯೂರಿಯಾದಿಂದ ಹಾಲಿನ ಉತ್ಪನ್ನಗಳನ್ನು ತಯಾರಿಸ್ತಾರಾ ಅನ್ನೋದು ನಿಮ್ ಪ್ರಶ್ನೆಯಾದರೆ ಇದಕ್ಕೆಲ್ಲಾ ಉತ್ತರ ಹೌದು ತಯಾರಿಸುತ್ತಾರೆ. ಜನರ ಕಣ್ಣಿಗೆ ಮಣ್ಣೆರಚಿ ಶ್ರೀಮಂತಿಕೆಯ ಮೋಹಕ್ಕೆ ಬಿದ್ದರೆ ಆಗಬಾರದ್ದೆಲ್ಲಾ ಆಗಿ ಹೋಗುತ್ತದೆ. ಆದರೆ ಎಲ್ಲದಕ್ಕೂ ಒಂದು ಕೊನೆ ಎಂಬುದು ಇದ್ದೇ ಇರುತ್ತದೆ. ಹಾಗೆಯೇ ಆಯಿತು ಮಧ್ಯಪ್ರದೇಶದ ಈ ಸೋದರರಿಬ್ಬರ ಕಥೆ. ಸಿರಿವಂತಿಕೆಯ ಆಸೆಗೆ ಬಿದ್ದು ಜನರ ಹೊಟ್ಟೆಗೆ ವಿಷ ಹಾಕಿದವರು ಇಂದು ಜೈಲು ಸೇರಿದ್ದಾರೆ. ಒಂದು ಸಣ್ಣ ಅನುಮಾನದಿಂದ ಶುರುವಾದ ಪೊಲೀಸರ ತನಿಖೆ ಹಾಲಿನ ಮಾಫಿಯಾದ ಹಿಂದಿರುವ ಹಲವರ ಬಣ್ಣ ಬಯಲು ಮಾಡಿದೆ.
ಏಳು ವರ್ಷದ ಹಿಂದೆ ಬೈಕಿನಲ್ಲಿ ಹಾಲು ಹಾಕಿ ಜೀವನ ನಡೆಸುತ್ತಿದ್ದ ಸೋದರರಿಬ್ಬರು ಇಂದು ವಿಷ ಮಿಶ್ರಿತ (ಸಿಂಥೆಟಿಕ್) ಹಾಲು ಮಾರಿ ಕೋಟ್ಯಧಿಪತಿಗಳಾಗಿದ್ದಾರೆ. ಅಂದಾಜು 2 ಕೋಟಿ ರೂ. ಮೌಲ್ಯದ ಹಾಲು ಶೇಖರಣಾ ಘಟಕ, ಮಿಲ್ಕ್ ಟ್ಯಾಂಕರ್, ಮೂರು ಬೃಹತ್ ಬಂಗಲೆ, ಐಷಾರಾಮಿ ಕಾರ್ ಮತ್ತು ಕೃಷಿ ಭೂಮಿಗೆ ಮಾಲೀಕರಾಗಿದ್ದಾರೆ.
ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯ ಢಾಕಪುರ ಗ್ರಾಮದ ನಿವಾಸಿಗಳಾದ ದೇವೇಂದ್ರ ಗುರ್ಜಾರ್ (42) ಮತ್ತು ಜೈವೀರ್ ಗುರ್ಜಾರ್ (40) ಇಂದು ಫಾರ್ಚೂನರ್ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಹಾಲು ಉತ್ಪಾದನೆ ಘಟಕಗಳಲ್ಲಿಯ ಅಕ್ರಮ ವ್ಯವಹಾರ ಮೂಲಕವೇ ಈ ಸೋದರರಿಬ್ಬರು ಶ್ರೀಮಂತರಾಗಿದ್ದು ಬೆಳಕಿಗೆ ಬಂದಿದೆ. ಮಧ್ಯ ಪ್ರದೇಶದ ವಿಶೇಷ ಪೊಲೀಸ್ ತನಿಖಾ ತಂಡ ಇಬ್ಬರು ಸೋದರರು ಜನರಿಗೆ ಹಾಲಿನ ರೂಪದಲ್ಲಿ ಹಾಲಾಹಲ ನೀಡುತ್ತಿರುವುದನ್ನು ಪತ್ತೆ ಹಚ್ಚುವಲ್ಲಿ ಯಶ್ವಸಿಯಾಗಿದ್ದಾರೆ.
ಸಿಂಥೆಟಿಕ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವ ಗ್ರಾಹಕರಿಗೆ ನಿಧಾನಗತಿಯಲ್ಲಿ ವಿಷವನ್ನು ನೀಡುತ್ತಿದ್ದವು. ಈ ಅಕ್ರಮದಲ್ಲಿ ದೇವೇಂದ್ರ ಗುರ್ಜಾರ್ ಸೇರಿದಂತೆ ಚಂಬಲ್ ಪ್ರದೇಶದಲ್ಲಿನ ಇತರೆ ಹಾಲು ಉತ್ಪಾದಕರ ಹೆಸರುಗಳನ್ನು ಎಫ್‍ಐಆರ್ ನಲ್ಲಿ ಸೇರಿಸಲಾಗಿದೆ. ಕಳೆದ ಐದರಿಂದ ಏಳು ವರ್ಷಗಳಲ್ಲಿ ದಿಢೀರ್ ಶ್ರೀಮಂತರಾದ ಹಾಲು ಉತ್ಪಾದಕರ ಹೆಸರನ್ನು ಎಫ್‍ಐಆರ್ ನಲ್ಲಿ ಸೇರಿಸಲಾಗಿದೆ. ಮಧ್ಯ ಪ್ರದೇಶ ಮಾತ್ರವಲ್ಲದೇ ಹರ್ಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಿಗೂ ಇವರ ಘಟಕಗಳಲ್ಲಿ ಸಿದ್ಧಗೊಂಡ ಹಾಲು ಮತ್ತು ಉತ್ಪನ್ನಗಳು ಸರಬರಾಜು ಆಗುತ್ತಿತ್ತು.
ಏನು ಮಿಕ್ಸ್ ಮಾಡಲಾಗುತ್ತಿತ್ತು?
ಸಿಂಥೆಟಿಕ್ ಹಾಲಿನಲ್ಲಿ ಮುಖ್ಯವಾಗಿ ಗ್ಲುಕೋಸ್, ಯೂರಿಯಾ, ಸಂಸ್ಕರಿಸಿದ ಎಣ್ಣೆ, ಹಾಲಿನ ಪೌಡರ್ ಮತ್ತು ನೀರು ಮಿಶ್ರಣ ಮಾಡಲಾಗುತ್ತಿತ್ತು. ಇವುಗಳ ಜೊತೆಗೆ ಹೈಡ್ರೋಜನ್ ಪೆರಾಕ್ಸೈಡ್ (hydrogen peroxide) ಸಹ ಹಾಲಿನಲ್ಲಿ ಮಿಶ್ರಣ ಮಾಡಿ ಉಪ ಉತ್ಪನ್ನಗಳಾದ ಚೀಸ್ ಮತ್ತು ಮಾವಾ ಸಿದ್ಧಗೊಳಿಸಲಾಗುತ್ತಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ವಿಶೇಷ ತನಿಖಾ ತಂಡದ ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ ಭಡೋರಿಯಾ, ಪ್ರಕರಣದ ತನಿಖೆಯಲ್ಲಿ ಪ್ರಮುಖ ಆರು ಆರೋಪಿಗಳಾದ ದೇವೇಂದ್ರ ಗುರ್ಜಾರ್, ಜೈವೀರ್ ಗುರ್ಜಾರ್, ದಿನೇಶ್ ಶರ್ಮಾ, ಸಂತೋಷ್ ಸಿಂಗ್ ಮತ್ತು ರಾಜೀವ್ ಗುಪ್ತಾ ಎಂಬವರನ್ನು ಪತ್ತೆ ಹಚ್ಚಲಾಗಿದೆ. ಇವರೆಲ್ಲರೂ ಹೆಚ್ಚು ಆಸ್ತಿಯನ್ನು ಹೊಂದಿದ್ದು, ಕಳೆದ ಐದು ವರ್ಷದಲ್ಲಿಯೇ ಇವರ ಜೀವನಶೈಲಿಯಲ್ಲಿ ದಿಢೀರ್ ಬದಲಾವಣೆ ಕಂಡಿದೆ. ಇವರೆಲ್ಲರ ಆರ್ಥಿಕ ಸ್ಥಿತಿಯ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೂ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಆರು ಜನರ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು ಆಹಾರ ಕಲಬೆರಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಂಬಲ್ ಪ್ರದೇಶದಲ್ಲಿ ಒಂದು ಲೀಟರ್ ಹಾಲು ಉತ್ಪಾದಿಸಲು 6 ರೂ. ವ್ಯಯಿಸಿ ಸಗಟು ಮಾರುಕಟ್ಟೆಯಲ್ಲಿ ಲೀಟರ್ ಗೆ 25 ರೂ.ನಂತೆ ಇವರು ಹಾಲು ಮಾರಾಟ ಮಾಡುತ್ತಿದ್ದರು. ಒಂದು ಲೀಟರ್ ಹಾಲಿನಿಂದ ಶೇ.70ರಿಂದ 75 ರಷ್ಟು ಲಾಭವನ್ನು ಗಳಿಸುತ್ತಿದ್ದರು. ಸಿಂಥೆಟಿಲ್ ಹಾಲಿನಲ್ಲಿ ಗ್ಲುಕೋಸ್, ಯೂರಿಯಾ, ರಿಫೈನ್ಡ್ ಆಯಿಲ್, ಹಾಲಿನ ಪೌಡರ್ ಮತ್ತು ನೀರನ್ನು ಮಿಶ್ರಣ ಮಾಡುತ್ತಿದ್ದರು. ಇದರ ಜೊತೆ ಸಿಂಥೆಟಿಕ್ ಚೀಸ್ ಮತ್ತು ಮಾವಾಗಳ ಲಾಭಾಂಶ ಸಹ ಹೆಚ್ಚಾಗಿತ್ತು ಎಂದು ಭಡೋರಿಯಾ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ಹೇಳೋದೇನು?: ಇಲ್ಲಿಯ ಚಿಕ್ಕ ಮಕ್ಕಳಿಗೂ ಹಾಲಿನ ವ್ಯವಹಾರ ಲಾಭದಾಯಕ ಅಂತಾ ಗೊತ್ತಾಗಿದೆ. ಕೃತಕ ಹಾಲಿನ ಉತ್ಪಾದನೆಯನ್ನು ಕಂಡು ಈ ರೀತಿಯ ವ್ಯಾಪಾರಕ್ಕೆ ಸ್ಥಳೀಯರು ಮುಂದಾಗುತ್ತಿರೋದು ಆತಂಕಕಾರಿ ವಿಷಯ. ಮೊದಲಿಗೆ ಮಿಶ್ರಿತ ಹಾಲು ಮಾರುತ್ತಿದ್ದವರು ಇಂದು ಸಿಂಥೆಟಿಕ್ ಹಾಲನ್ನು ಮಾರುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೆಲವರ ಜೀವನ ಶೈಲಿಯೇ ಬದಲಾಗಿದೆ. ಬೆಲೆ ಬಾಳುವ ಆಭರಣಗಳು, ಬ್ರಾಂಡೆಡ್ ಬಟ್ಟೆ, ಶೂ, ಬೃಹತ್ ಬಂಗಲೆಗಳು, ಐಷಾರಾಮಿ ಕಾರುಗಳನ್ನು ಬಳಸುತ್ತಿದ್ದಾರೆ. ಸಿಂಥೆಟಿಕ್ ಹಾಲಿನ ಸಮಸ್ಯೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದೇವೆ. ಆದ್ರೆ ಆಡಳಿತ ಮಂಡಳಿ ಯಾರ ವಿರುದ್ಧವೂ ಕ್ರಮಕ್ಕೆ ಮುಂದಾಗಲಿಲ್ಲ ಎಂದು ಮೊರೆನಾ ಜಿಲ್ಲೆಯ ಅಂಭಾ ನಿವಾಸಿ ರಾಂಪಾಲ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಚಂಬಲ್ ವ್ಯಾಪ್ತಿಯ 10 ದೊಡ್ಡ ಡೈರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಲ್ಲಿಯ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದು ಬೀಗ ಹಾಕಿದ್ದಾರೆ. ಮಧ್ಯ ಪ್ರದೇಶದಲ್ಲಿ ಬಹುತೇಕ ಕಡೆ ಹಾಲಿನ ಡೈರಿಗಳ ಮೇಲೆ ದಾಳಿ ನಡೆದಿದ್ದು, ಕಳೆದ ಆರು ದಿನಗಳಲ್ಲಿ 65 ಜನರನ್ನು ಬಂಧಿಸಲಾಗಿದೆ. ಮಧ್ಯ ಪ್ರದೇಶದ ಹಾಲು ಒಕ್ಕೂಟ ಚಂಬಲ್ ವ್ಯಾಪ್ತಿಯ 200 ಹಾಲು ಸಹಕಾರಿ ಸಂಘಗಳ ಮೇಲೆ ನಿಷೇಧ ಹೇರಿದೆ.
ದಿನಕ್ಕೆ 19 ಲಕ್ಷ ಲೀಟರ್ ಕೃತಕ ಹಾಲು: ಚಂಬಲ್ ಪ್ರದೇಶದಲ್ಲಿ ದಿನಕ್ಕೆ 11 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಆದ್ರೆ ಇಲ್ಲಿಂದ ದಿನಕ್ಕೆ 30 ಲಕ್ಷ ಲೀಟರ್ ಹಾಲು ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು. ಅಂದರೆ 19 ಲಕ್ಷ ಲೀಟರ್ ಕೃತಕ ಕಲಬೆರಕೆ ಹಾಲನ್ನು ಉತ್ಪಾದಿಸಲಾಗುತ್ತಿತ್ತು. ಈ ಕಲಬೆರಕೆ ಹಾಲಿನ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಶೋಕ್ ಅವಸ್ತಿ ಹೇಳಿದ್ದಾರೆ.
ಜುಲೈ 26ರಂದು ಬಿಂಧ್ ಪ್ರದೇಶದ ಗಿರ್ ರಾಜ್ ಫುಡ್ ಸಪ್ಲಯರ್ಸ್, ಗೋಪಾಲ್ ಚಿಲ್ಲಿಂಗ್ ಸೆಂಟರ್ ಮತ್ತು ಮೊರೆನಾ ನಗರದ ವನಖಂಡೇಶ್ವರಿ ಡೈರಿ ಆ್ಯಂಡ್ ಫ್ಯಾಕ್ಟರಿ ಮೇಲೆ ವಿಶೇಷ ತನಿಖಾ ತಂಡ ದಾಳಿ ನಡೆಸಿತ್ತು. ದಾಳಿಯಲ್ಲಿ 17 ಸಾವಿರ ಲೀಟರ್ ಕೃತಕ ಹಾಲು, 1,000 ಕೆಜಿ ಸಿಂಥೆಟಿಕ್ ಮಾವಾ ಮತ್ತು 1,500 ಕೆಜಿ ಸಿಂಥೆಟಿಕ್ ಚೀಸ್ ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಅಶೋಕ್ ಆವಸ್ತಿ ತಿಳಿಸಿದ್ದಾರೆ.
ಶುಕ್ರವಾರ ದಾಳಿ ನಡೆದ ಡೈರಿಗಳಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಲು ಯೂರಿಯಾ, ಕೆಮಿಕಲ್ಸ್, ಗ್ಲುಕೋಸ್, ಶ್ಯಾಂಪೂ, ರಿಫೈನ್ಡ್ ಆಯಿಲ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬಳಸುತ್ತಿದ್ದರು. ಆದ್ರೆ ಇವರೆಲ್ಲರು ನೈಸರ್ಗಿಕವಾದ ಹಾಲನ್ನೇ ಇದಕ್ಕೆ ಮಿಶ್ರಣ ಮಾಡುತ್ತಿರಲಿಲ್ಲ.
ಈ ಸಂಬಂಧ ಮಧ್ಯ ಪ್ರದೇಶ ಸರ್ಕಾರ ರಾಸಾಯನಿಕ ಮಿಶ್ರಿತ ಹಾಲು ಮತ್ತು ಕಲಬೆರಕೆಯ ಹಾಲಿನ ಉತ್ಪನ್ನಗಳ ತಯಾರಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪಿಗಳನ್ನು ಒಂದು ತಿಂಗಳವರೆಗೂ ಬಂಧನದಲ್ಲಿಟ್ಟುಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಆರೋಪಿ ಮತ್ತೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗೋದನ್ನು ತಡೆಯುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ.
ಅಕ್ರಮ ಹಾಲು ಉತ್ಪಾದನಾ ಘಟಕಗಳ ವಿರುದ್ಧ ಸರ್ಕಾರ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಮಧ್ಯ ಪ್ರದೇಶದ 52 ಜಿಲ್ಲೆಗಳ ಆರೋಗ್ಯ ಇಲಾಖೆಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಜನರು ಸಿಂಥೆಟಿಕ್ ಹಾಲಿನ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದರು. ಯೂರಿಯಾ ಮಿಶ್ರಿತ ಹಾಲಿನ ಸೇವನೆಯಿಂದ ಶಾಶ್ವತ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆಯ ಸೋಂಕು, ಹಸಿವು ಆಗದಿರುವುದು, ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಓರ್ವ ವ್ಯಕ್ತಿ ದೀರ್ಘ ಕಾಲದವರೆಗೆ ಈ ರೀತಿಯ ಕಲಬೆರಕೆ ಹಾಲು ಸೇವನೆ ಮಾಡಿದ್ರೆ ಆತ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಯಕೃತ್ತಿನ ತಜ್ಞ ಡಾ.ಸಂಜಯ್ ಕುಮಾರ್ ತಿಳಿಸಿದ್ದಾರೆ.