– ರೋಷನ್ ಬೇಗ್ ಉತ್ತರಿಸಲಿ
– ಬಿಜೆಪಿಯಿಂದ ದ್ವಿಮುಖ ನೀತಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ಇಂದು ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಸಿಎಂ ಅವರ ಈ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಜಮೀರ್ ಅಹಮದ್, ಕಳೆದ ಬಾರಿಗಿಂತ ಈ ಬಾರಿ ಟಿಪ್ಪು ಜಯಂತಿಯನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡುತ್ತೇವೆ. ಜಯಂತಿಯನ್ನು ಆವತ್ತಿನಿಂದಲೇ ಆಚರಿಸಿಕೊಂಡು ಬರುತ್ತಿದ್ದೇವೆ. ಹೀಗಾಗಿ ಈ ಬಾರಿಯೂ ಜಯಂತಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ನನಗೆ ಮಾಧ್ಯಮಗಳ ಮುಖಾಂತರ ವಿಚಾರ ತಿಳಿಯಿತು. ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು 2016ರಲ್ಲಿ ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿದ್ದರು. ಬರೀ ಕರ್ನಾಟಕ ಅಲ್ಲ ಇಡೀ ಹಿಂದೂಸ್ತಾನದಲ್ಲಿ ಟಿಪ್ಪು ಅಭಿಮಾನಿಗಳು ಇದ್ದಾರೆ. ಯಾರು ಜಾತ್ಯಾತೀತ ಎಂದು ಇದ್ದಾರೋ ಅವರೆಲ್ಲರೂ ಟಿಪ್ಪು ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆಯೂ ನಾವು ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಚಾಲೆಂಜ್ ಮಾಡಿದ್ದಾರೆ.
ಜಯಂತಿಯನ್ನು ಇಷ್ಟೊಂದು ತರಾತುರಿಯಲ್ಲಿ ರದ್ದು ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಟಿಪ್ಪು ಜಯಂತಿ ಆಚರಣೆಯನ್ನು ಒಂದು ಸರ್ಕಾರ ನಿರ್ಧಾರ, ತೀರ್ಮಾನ ಮಾಡಿ ಅದಕ್ಕಂತಲೇ ಒಂದು ಕ್ಯಾಬಿನೆಟ್ ಸಭೆ ಕರೆದು ಅಲ್ಲಿ ತೀರ್ಮಾನ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಒಬ್ಬರೇ ಹೇಗೆ ತೀರ್ಮಾನ ತೆಗೆದುಕೊಂಡರು ಎಂದು ಗೊತ್ತಿಲ್ಲ ಎಂದರು.
ರೋಷನ್ ಬೇಗ್ ವಿರುದ್ಧ ಕಿಡಿ:
ಆಚರಣೆ ಮಾಡಿರುವ ಕುರಿತು ರೋಷನ್ ಬೇಗ್ ಅವರನ್ನು ಪ್ರಶ್ನಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೊರಟ್ಟಿದ್ದಾರಲ್ವಾ ಅವರು ಉತ್ತರ ಕೊಡಬೇಕು. ಎಲ್ಲಾ ಒಂದೇ ಕಡೆ ಇರಬೇಡಿ. ಬಿಜೆಪಿಗೆ ಬನ್ನಿ ಎಂದು ಅವರು ಒಂದು ಕಡೆ ಭಾಷಣದಲ್ಲಿ ಹೇಳಿದ್ದಾರೆ. ಇದಕ್ಕೆ ಏನಂತಾರೆ ಅಂತ ರೋಷನ್ ಬೇಗ್ ಅವರನ್ನು ಕೇಳಬೇಕು ಎಂದು ಬೇಗ್ ವಿರುದ್ಧ ಕೆಂಡಾಮಂಡಲರಾದರು.
ಕಾಂಗ್ರೆಸ್ ಟ್ವೀಟ್:
ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ 24 ಗಂಟೆಯೊಳಗೆ ದ್ವೇಷ ರಾಜಕಾರಣ ಮಾಡಿದ ವಚನ ಭ್ರಷ್ಟ ಬಿಎಸ್‍ವೈ ಕೇವಲ ಕೋಮುವಾದ ದೃಷ್ಟಿಕೋನದಿಂದಲೇ ಇತಿಹಾಸವನ್ನು ನೋಡುವ ಬಿಜೆಪಿ, ಆರ್ ಎಸ್‍ಎಸ್ ಇತಿಹಾಸವನ್ನು, ಟಿಪ್ಪುವಿನ ಕೊಡುಗೆಯನ್ನು ಓದಿ ತಿಳಿದುಕೊಳ್ಳಬೇಕಿದೆ.
ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ 24 ಗಂಟೆಯೊಳಗೆ ದ್ವೇಷ ರಾಜಕಾರಣ ಮಾಡಿದ ವಚನ ಭ್ರಷ್ಟ @BSYBJP
ಕೇವಲ ಕೋಮುವಾದ ದೃಷ್ಟಿಕೋನದಿಂದಲೇ ಇತಿಹಾಸವನ್ನು ನೋಡುವ ಬಿಜೆಪಿ/ಆರೆಸ್ಸೆಸ್ ಇತಿಹಾಸವನ್ನು, ಟಿಪ್ಪುವಿನ ಕೊಡುಗೆಯನ್ನು ಓದಿ ತಿಳಿದುಕೊಳ್ಳಬೇಕಿದೆ.
ಟಿಪ್ಪು ಜಯಂತಿ ರದ್ದತಿಯಿಂದ @BJP4Karnataka ದ ದ್ವಿಮುಖ ನೀತಿ ಬಹಿರಂಗವಾಗಿದೆ. pic.twitter.com/ByiahDVzVU
— Karnataka Congress (@INCKarnataka) July 30, 2019
ಟಿಪ್ಪು ಜಯಂತಿ ರದ್ದತಿಯಿಂದ ಬಿಜೆಪಿಯ ದ್ವಿಮುಖ ನೀತಿ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಬಿಎಸ್‍ವೈ ಹಾಗೂ ಕರ್ನಾಟಕ ಬಿಜೆಪಿಗೆ ಟ್ಯಾಗ್ ಮಾಡಿದೆ. ಈ ಟ್ವೀಟ್ ನಲ್ಲಿ ಈ ಹಿಂದೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪಿಸಿ ಮೋಹನ್, ಯೋಗೇಶ್ವರ್ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫೋಟೋವನ್ನು ಅಪ್ಲೋಡ್ ಮಾಡಿದೆ.