ಜೈಪಾಲ್ ರೆಡ್ಡಿಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

Public TV
2 Min Read
JAIPAL REDDY SIDDARAMAIAH 2 copy

ಹೈದರಾಬಾದ್: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಜೈಪಾಲ್ ರೆಡ್ಡಿ ಅವರಿಗೆ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅಂತಿಮ ನಮನ ಸಲ್ಲಿಸಿದರು.

ಜೈಪಾಲ್ ರೆಡ್ಡಿ ಅವರ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಅಂತಿಮ ಯಾತ್ರೆ ವೇಳೆಗೆ ಹೆಗಲು ಕೊಟ್ಟರು. ಭಾನುವಾರ ಮುಂಜಾನೆ ಹೈದರಾಬಾದಿನ ಆಸ್ಪತ್ರೆಯಲ್ಲಿ 77 ವರ್ಷದ ಜೈಪಾಲ್ ರೆಡ್ಡಿ ನಿಧನರಾಗಿದ್ದರು.

ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜೈಪಾಲ್ ರೆಡ್ಡಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. 1984 ರಿಂದ ಐದು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಅವರು 2 ಬಾರಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು.

JAIPAL REDDY SIDDARAMAIAH 3 copy

ಹೈದರಾಬಾದ್ ನೆಕ್ಲೇಸ್ ರೋಡ್‍ನಲ್ಲಿರುವ ಸರ್ಕಾರಿ ಸ್ಥಳದಲ್ಲಿ ಅವರ ಅಂತಿಮ ವಿಧಿ ವಿಧಾನಗಳು ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರಿಗೆ ಅಂತಿಮ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಹಾಗೂ ಮಾಜಿ ಸ್ಪೀಕರ್ ಅವರು ಅಂತಿಮ ವಿಧಿ ವಿಧಾನದ ವೇಳೆ ಹೆಗಲು ನೀಡಿ ಅವರೊಂದಿಗೆ ಇದ್ದ ಅನುಬಂಧವನ್ನು ನೆನಪಿಸಿಕೊಂಡಿದ್ದಾರೆ. ಒಂದು ಕಡೆ ರಮೇಶ್ ಕುಮಾರ್ ಮತ್ತೊಂದು ಬದಿಯಲ್ಲಿ ಸಿದ್ದರಾಮಯ್ಯ ಅವರು ಹೆಗಲು ನೀಡಿರುವುದನ್ನು ಕಾಣಬಹುದಾಗಿದೆ.

ವಿಧಾನಸೌಧದಲ್ಲಿ ನಿನ್ನೆ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು, ಜೈಪಾಲ್ ರೆಡ್ಡಿ ಅವರನ್ನು ಕಳೆದುಕೊಂಡಿದ್ದು ನನಗೆ ಅತ್ಯಂತ ದುಃಖದ ದಿನವಾಗಿದೆ. ನನ್ನ ಸಾರ್ವಜನಿಕ ಬದುಕಿಗೆ ಬಹಳಷ್ಟು ಪರಿಣಾಮಕಾರಿಯಾದ ಸಲಹೆ, ಮಾರ್ಗದರ್ಶನ ಕೊಟ್ಟಿದ್ದರು. ವೈಯಕ್ತಿಕ ಬದುಕಿನಲ್ಲಿ ಸುಮಾರು 35 ವರ್ಷದಿಂದ ನನಗೆ ಹಿರಿಯ ಸಹೋದರನಂತೆ ನನ್ನನ್ನು ಪ್ರೀತಿಸಿದ್ದರು. ಅಲ್ಲದೇ ಅತ್ಯುತ್ತಮ ಸಂಸದೀಯ ಪಟುವಾಗಿದ್ದರು ಎಂದು ನೆನೆದು ಕಣ್ಣೀರಿಟ್ಟಿದ್ದರು.

JAIPAL REDDY SIDDARAMAIAH 1 copy

ಇಂದು ಸಿಎಂ ಬಿಎಸ್ ಯಡಿಯೂರಪ್ಪನವರು ವಿಶ್ವಾಸ ಮತಯಾಚನೆಗೂ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ಜೈಪಾಲ್ ರೆಡ್ಡಿ ಅವರ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ ತೆರಳಬೇಕಿದೆ. ಹೀಗಾಗಿ ಸದನವನ್ನು ಬೇಗನೇ ಮುಗಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲೇ ಹೇಳಿ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದರು. ಸದಸ್ಯರ ನಡುವೆ ಚರ್ಚೆ ಜಾಸ್ತಿಯಾದಾಗ ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡುತ್ತಿದ್ದರು. ಹೀಗಾಗಿ ಇಂದು ಸದನದಲ್ಲಿ ಜಾಸ್ತಿ ಚರ್ಚೆಯಾಗದೇ ಧನ ವಿಧೇಯಕ ಮತ್ತು ಪೂರಕ ಬಜೆಟ್ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತ್ತು. ಬಳಿಕ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ವಿಧಾನಸಭಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಹೈದರಾಬಾದಿಗೆ ತೆರಳಿದ್ದರು.

https://www.youtube.com/watch?v=KyifPvdzz9A

Share This Article
Leave a Comment

Leave a Reply

Your email address will not be published. Required fields are marked *