ಪಾಟ್ನಾ: ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಪರ ಬ್ಯಾಟ್ ಬೀಸಲು ಹೋಗಿ ಹಿಂದುಸ್ತಾನಿ ಆವಂ ಮೋರ್ಚಾ ಮುಖಂಡ, ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಟ್ನಾದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಣ್ಣ-ತಂಗಿ, ಅಕ್ಕ-ತಮ್ಮ ಭೇಟಿಯಾದಾಗ ಪರಸ್ಪರ ಚುಂಬಿಸುತ್ತಾರೆ. ಇದು ಸೆಕ್ಸ್ ಗೆ ಸಮಾನವೇ? ತಾಯಿ, ಮಗನಿಗೆ ಮುತ್ತು ಕೊಡುವುದು ಸೆಕ್ಸಾ? ಅಜಂ ಖಾನ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಕ್ಷಮೆ ಕೇಳಬೇಕು ಎನ್ನುವುದು ಸರಿ. ಆದರೆ ಅಜಂ ಖಾನ್ ರಾಜೀನಾಮೆ ಕೊಡುವಷ್ಟು ದೊಡ್ಡ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ತ್ರಿವಳಿ ತಲಾಖ್ ಕುರಿತು ಲೋಕಸಭೆಯಲ್ಲಿ ಗುರುವಾರ ಗಂಭೀರ ಚರ್ಚೆ ನಡೆದಿತ್ತು. ಈ ವೇಳೆ ಸ್ಪೀಕರ್ ಸ್ಥಾನದಲ್ಲಿದ್ದ ಬಿಜೆಪಿಯ ಸಂಸದೆ ರಮಾದೇವಿ ಅವರ ಕಡೆಗೆ ನೋಡಿದ ಅಜಂ ಖಾನ್, ನೀವು ಎಂದರೆ ನನಗೆ ತುಂಬಾ ಇಷ್ಟ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಬೇಕು ಎನಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅಜಂ ಖಾನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ರಮಾದೇವಿ ಅವರು, ಸಂಸದರಾಗಿ ಹೀಗೆ ಮಾತನಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಗುಡುಗಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಅಜಂ ಖಾನ್ ಅವರು, ನೀವು ನನ್ನ ಸಹೋದರಿ ಸಮಾನ. ಆ ದೃಷ್ಟಿಯಿಂದ ಮಾತನಾಡಿದೆ ಅಷ್ಟೇ ಎಂದು ಹೇಳಿ ಜಾರಿಕೊಂಡಿದ್ದರು.
ಆಡಳಿತ ಪಕ್ಷದ ಸದಸ್ಯರು, ಅಜಂ ಖಾನ್ ಸದನಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಆದರೆ ಕ್ಷಮೆ ಯಾಚಿಸಲು ನಿರಾಕರಿಸಿದ ಅಜಾಂ ಖಾನ್, ಅಸಂಸದೀಯ ಪದವನ್ನು ನಾನು ಬಳಸಿಲ್ಲ. ಬೇಕಾದರೆ ರಾಜೀನಾಮೆ ನೀಡುತ್ತೇನೆ. ಕ್ಷಮೆ ಕೇಳುವುದಿಲ್ಲ ಎಂದು ಕಲಾಪದಿಂದ ಹೊರನಡೆದಿದ್ದರು. ಈ ವೇಳೆ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಅವರು, ಅಜಂ ಖಾನ್ ಮಾತು ಕವಿತೆಯಂತಿತ್ತು. ಅದರಲ್ಲೇನು ತಪ್ಪಿದೆ ಅಂತ ಸಮರ್ಥಿಸಿಕೊಂಡು ಸದನದಿಂದ ನಿರ್ಗಮಿಸಿದ್ದರು.
ಅಜಂ ಖಾನ್ ರಾಜೀನಾಮೆಗೆ ಬಿಜೆಪಿ ಸಂಸದರು ಪಟ್ಟು ಹಿಡಿದು ಕುಳಿತಿದ್ದಾರೆ. ಜೊತೆಗೆ ಪಕ್ಷಾತೀತವಾಗಿ ಮಹಿಳಾ ಸಂಸದರು ಅಜಂ ಖಾನ್ ವಿರುದ್ಧ ಗುಡುಗಿದ್ದಾರೆ. ಹೀಗಾಗಿ ಅವರ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದ್ದಾರೆ.
ಈ ಸಂಬಂಧ ಮಾಯಾವತಿ ಅವರು ಕೂಡ ಟ್ವೀಟ್ ಮಾಡಿದ್ದು, ಎಸ್‍ಪಿ ಸಂಸದರ ಹೇಳಿಕೆ ಹೇಳಿಕೆ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದು, ನೋವು ತಂದಿದೆ. ಅಜಂ ಖಾನ್ ಅವರ ಹೇಳಿಕೆ ಅತ್ಯಂತ ಖಂಡನೀಯ. ಅವರು ಲೋಕಸಭೆಯಲ್ಲಿ ಅಷ್ಟೇ ಅಲ್ಲದೆ ಎಲ್ಲಾ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.