6ರ ಪೈಕಿ ಸಚಿವ ಸ್ಥಾನ ಯಾರಿಗೆ – ಉಡುಪಿಯಲ್ಲಿ ಶುರುವಾಗಿದೆ ಮಿನಿಸ್ಟರ್ ಲೆಕ್ಕಾಚಾರ

Public TV
2 Min Read
UDUPI MINISTER LIST 1

ಉಡುಪಿ: ವಿಶ್ವಾಸ ಮತದಲ್ಲಿ ಸೋತು ಮೈತ್ರಿ ಸರಕಾರ ಅಧಿಕಾರ ಕಳೆದುಕೊಂಡಿದ್ದು, ಹಸಿರು ಶಾಲು ಹೊದ್ದು ಬಿಎಸ್ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಬಿಜೆಪಿ ನಾಯಕರಲ್ಲಿ ಯಾರು ಮಂತ್ರಿಯಾಗಬಹುದು, ಯಾರಿಗೆ ನಿಗಮ ಮಂಡಳಿ ಸಿಗಬಹುದು ಎಂಬ ಕೂಡಿ ಕಳೆಯುವ ಲೆಕ್ಕಾಚಾರ ಆರಂಭವಾಗಿದೆ.

ಮೈತ್ರಿ ಸರ್ಕಾರದ 13 ತಿಂಗಳಿಗೆ ವಿಶ್ವಾಸ ಕಳೆದ ಬೆನ್ನಲ್ಲೇ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡುವ ಓಡಾಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಐದಕ್ಕೈದು ಬಿಜೆಪಿ ಶಾಸಕರೇ ಇರುವುದರಿಂದ, ಅದರಲ್ಲೂ ಎಲ್ಲ ನಾಯಕರು ಹಿರಿಯರೇ ಆಗಿರುವುದರಿಂದ ರಾಜ್ಯ ನಾಯಕರಿಗೆ ತಲೆ ಬಿಸಿ ಶುರುವಾಗಿದೆ.

CM BSY

ಹಿಂದುಳಿದ ವರ್ಗದ ಪ್ರಬಲ ನಾಯಕ ಪೂಜಾರಿ:
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉಡುಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಬಹುದು ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಕೋಟ ಅವರು ಪರಿಷತ್ ವಿಪಕ್ಷ ನಾಯಕರೂ ಆಗಿದ್ದು, ಮೂರು ಬಾರಿ ಎಂಎಲ್‍ಸಿ, ಒಂದು ಬಾರಿ ಮುಜರಾಯಿ ಇಲಾಖೆ ಸಚಿವರಾದವರು. ಗ್ರಾಮ ಪಂಚಾಯತ್, ತಾಲೂಕು, ಜಿಲ್ಲಾಪಂಚಾಯತ್ ಸದಸ್ಯರು, ಹಿರಿತನದ ಆಧಾರದ ಮೇಲೆ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಇದೆ.

ಹಿಂದೂ ಫೈರ್ ಬ್ರ್ಯಾಂಡ್ ವಿ.ಸುನೀಲ್ ಕುಮಾರ್:
ಮೂರು ಸಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಯುವ ನಾಯಕರಾಗಿದ್ದು, ಸದ್ಯ ವಿಪಕ್ಷದ ಮುಖ್ಯ ಸಚೇತಕರಾಗಿದ್ದಾರೆ. ವಿಶ್ವಾಸಮತ ಯಾಚನೆ ಸಂದರ್ಭದ ಜವಾಬ್ದಾರಿಯಿಂದ ಹೈಕಮಾಂಡ್ ನಾಯಕರನ್ನು ಸೆಳೆದಿದ್ದಾರಂತೆ. ಹಿಂದೂ ಫೈರ್ ಬ್ರ್ಯಾಂಡ್ ಅಂತ ಸುನೀಲ್ ಗುರುತಿಸಿಕೊಂಡಿದ್ದು, ಕರಾವಳಿಯ ಪ್ರಬಲ ಬಿಲ್ಲವ ಜಾತಿ ಬಲ ಕೂಡ ಇರೋದರಿಂದ ಸಂಪುಟಕ್ಕೆ ಹೊಸಮುಖವನ್ನು ತರ್ತಾರೆ ಎಂಬ ಲೆಕ್ಕಾಚಾರವೂ ಇದೆ.

ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ:
ನಾಲ್ಕು ಬಾರಿ ಬಿಜೆಪಿಯಿಂದ, ಒಂದು ಬಾರಿ ಪಕ್ಷೇತರರಾಗಿ ಆಯ್ಕೆಯಾಗುವ ಮೂಲಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಐದು ಬಾರಿ ಶಾಸಕರಾಗಿದ್ದಾರೆ. ಪಕ್ಷೇತರರಾದಾಗಲೂ ಬಿಜೆಪಿಗೆ ಬೆಂಬಲಿಸಿದ್ದ ಹಾಲಾಡಿಯವರಿಗೆ ಕಳೆದ ಬಾರಿ ಸಚಿವ ಸ್ಥಾನ ಕೈತಪ್ಪಿತ್ತು. ನೂತನ ಸಚಿವರ ಪಟ್ಟಿಯಲ್ಲಿ ಶ್ರೀನಿವಾಸ್ ಶೆಟ್ಟಿ ಎಂದು ಹೆಸರಿತ್ತು. ಆದರೆ ಪ್ರಮಾಣ ವಚನದ ದಿನ ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿ ಪಟ್ಟವಾಗಿತ್ತು. ಈ ಬಾರಿ ಹಾಲಾಡಿ ಅವರಾಗಿಯೇ ಮಂತ್ರಿಗಿರಿ ಕೇಳುವವರಲ್ಲ. ಆದರೂ ಹಿರಿತನಕ್ಕೆ ಮನ್ನಣೆ ನೀಡಿ ಹಾಲಾಡಿಗೆ ನಿಗಮ ಮಂಡಳಿ ಕೊಡುವ ಸಾಧ್ಯತೆಯಿದೆ.

UDUPI MINISTER LIST 2

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿಯಲ್ಲಿ ಸಚಿವ ಸ್ಥಾನ ಸಿಗಬಹುದಾದ ಐದು ಜನ ನಾಯಕರಿದ್ದಾರೆ. ಆದರೆ ನಮಗೆ ಸಚಿವ ಸ್ಥಾನ ಕೊಡಲೇಬೇಕೆಂದು ಒತ್ತಡ ಹೇರುವ ಗೋಜಿಗೆ ಹೋಗುವ ನಾಯಕರಿಲ್ಲ. ಎರಡು ಸ್ಥಾನ ನಮ್ಮ ಜಿಲ್ಲೆಗೆ ಸಿಕ್ಕರೆ ಈ ಜಿಲ್ಲೆಯ ಜನರ ಋಣ ತೀರಿಸಿದಂತಾಗುತ್ತದೆ. ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ ಎಂದು ಹೇಳಿದರು.

ಮೂರು ಬಾರಿ ಗೆದ್ದ ರಘುಪತಿ ಭಟ್ ಅವರು ಜಾತಿಯಲ್ಲಿ ಬ್ರಾಹ್ಮಣ. ಕಾಪು ಶಾಸಕ ಲಾಲಾಜಿ ಮೆಂಡನ್ ಮೊಗವೀರ ಸಮುದಾಯ ಪ್ರತಿನಿಧಿಸುತ್ತಾರೆ. ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಜಾತಿಯಲ್ಲಿ ಬಂಟ(ಶೆಟ್ಟಿ). ಇದಕ್ಕಿಂತ ಹೆಚ್ಚಾಗಿ ಬಿಎಸ್‍ವೈ ಅವರ ಬಲಗೈ ಬಂಟ. ಕೊಲ್ಲೂರು ದೇವಸ್ಥಾನದ ಧರ್ಮದರ್ಶಿ ಆಗಿದ್ದ ಶೆಟ್ಟಿ, ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದವರಾಗಿದ್ದಾರೆ. ಈ ಮೂವರು ಸಚಿವ ಸ್ಥಾನದ ಬೇಡಿಕೆ ಇಡುವವರಲ್ಲ. ಆದರೆ ವೈರಾಗ್ಯ ಬಂದವರೇನೂ ಅಲ್ಲ. ಈ ಬಾರಿ ಉಡುಪಿಯ ಮಟ್ಟಿಗೆ ಸಚಿವ ಸ್ಥಾನ ಕೊಡುವುದು ಪ್ರಮುಖರಿಗೆ ಹೇಳಿದಷ್ಟು ಸುಲಭ ಅಲ್ಲ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *