ರಾಯಚೂರು: ಕಾಲುವೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಜಿಲ್ಲೆಯ ಸಿಂಧನೂರಿನಲ್ಲಿ ಇರುವ ಅರಣ್ಯ ಇಲಾಖೆ ಕಚೇರಿ ಹಾಗೂ ವಸತಿ ಗೃಹಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಕಾಲುವೆಯ ನೀರು ಹೊರ ಹರಿದು ಅರಣ್ಯ ಇಲಾಖೆ ಕಚೇರಿ ಹಾಗೂ ವಸತಿ ಗೃಹಕ್ಕೆ ಸುತ್ತಮುತ್ತ ಪ್ರದೇಶ ಜಲಾವೃತಗೊಂಡಿದೆ. ಸಿಂಧನೂರು ನಗರದ ಕೆರೆಗೆ ಕುಡಿಯುವ ನೀರು ಪೂರೈಸುವ ಕಾಲುವೆ ಇದಾಗಿದ್ದು, ಅರಣ್ಯ ಇಲಾಖೆ ಕಚೇರಿ ಪಕ್ಕದಲ್ಲಿ ಕಾಲುವೆ ನೀರು ಹಾದು ಹೋಗುತ್ತದೆ. ಜುಲೈ 24ರಂದು ಹೆಚ್ಚಿನ ಪ್ರಮಾಣದಲ್ಲಿ ಈ ಕಾಲುವೆಗೆ ನೀರು ಬಿಡಲಾಗಿತ್ತು. ಹೀಗಾಗಿ ಕಾಲುವೆಯಿಂದ ಹೊರಬಂದ ನೀರು ಸುತ್ತಮುತ್ತಲ ಪ್ರದೇಶಕ್ಕೆ ನುಗ್ಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಪರದಾಡುವಂತಾಗಿದೆ.
ನಗರಸಭೆ ಪೌರಾಯುಕ್ತರಿಗೆ ಸಿಬ್ಬಂದಿ ಮನವಿ ಮಾಡಿದರೂ ಕೂಡ ನೀರಿನ ಹರಿವು ನಿಂತಿಲ್ಲ. ನೀರು ನುಗ್ಗಿದ್ದರಿಂದ ಕಚೇರಿ ಸುತ್ತಲೂ ಇದ್ದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಅಲ್ಲದೆ ಸ್ಥಳದಲ್ಲಿ ಹೀಗೆ ನೀರು ನಿಂತರೆ ಸಾಂಕ್ರಾಮಿಕ ರೋಗಗಳ ಹೆಚ್ಚಾಗುವ ಭೀತಿ ಸಿಬ್ಬಂದಿಗೆ ಕಾಡುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ.