ಮಡಿಕೇರಿ: ಕೊಡಗಿನಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಗುರುವಾರ ಸಾಧಾರಣ ಮಳೆ ಸುರಿದಿದೆ. ಮೂರು ದಿನಗಳ ಹಿಂದೆ ಸುರಿದಿದ್ದ ಭಾರೀ ಮಳೆಗೆ ಮಣ್ಣು ಸಡಿಲಗೊಂಡು 2ನೇ ಮೊಣ್ಣಂಗೇರಿ ಸಮೀಪದ ಕರ್ತೋಜಿ ಎಂಬಲ್ಲಿ ಬೆಟ್ಟದಿಂದ ಬಂಡೆಗಳು ಉರುಳಿವೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ದೊಡ್ಡ ಗಾತ್ರದ ಬಂಡೆಗಳು ಕೊಲ್ಲಿ ಪ್ರದೇಶಕ್ಕೆ ಉರುಳಿ ಬಂದಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮಣ್ಣು ಸಡಿಲವಾಗಿರುವ ಕಾರಣ ಬಂಡೆ ಉರುಳಿರುವ ಸಾಧ್ಯತೆಯಿದೆ. ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಮಾಂದಲ್‍ಪಟ್ಟಿ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ಮಣ್ಣು ಹಾಗೂ ಕಲ್ಲು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಸದ್ಯಕ್ಕೆ ವಾಹನ ಸಂಚಾರ ಬಂದ್ ಆಗಿದೆ. ಕಳೆದ 24 ಗಂಟೆಗಳಲ್ಲಿ ಭಾಗಮಂಡಲದಲ್ಲಿ 38 ಮಿ.ಮೀ, ಸಂಪಾಜೆಯಲ್ಲಿ 27, ನಾಪೋಕ್ಲು 17, ಮಡಿಕೇರಿ 14 ಮಿ.ಮೀ ಮಳೆಯಾಗಿದೆ. ಹೀಗಾಗಿ ಮಳೆ ಇಳಿಮುಖವಾಗಿದ್ದು, ಹಾರಂಗಿ ಜಲಾಶಯದ ಒಳಹರಿವು ಮತ್ತೆ ತಗ್ಗಿದೆ. ಮಡಿಕೇರಿಯಲ್ಲಿ ಆಗಾಗ ಬಿಡುವು ಪಡೆದುಕೊಂಡು ಸಾಧಾರಣ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಘೋಷಿಸಿದ್ದ ರೆಡ್ ಅಲರ್ಟ್ ಹಿಂತೆಗೆದುಕೊಳ್ಳಲಾಗಿದೆ. ಕೊಡಗಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 877.99 ಮಿ.ಮೀ. ಮಳೆ ಆಗಿದೆ. ಇದು ಕಳೆದ ವರ್ಷಕ್ಕಿಂತ ಶೇ.35 ರಷ್ಟು ಕಡಿಮೆ ಪ್ರಮಾಣದಲ್ಲಿದೆ. ಇದನ್ನೂ ಓದಿ: ಕೊಡಗಿನಲ್ಲಿ ರೆಡ್ ಅಲರ್ಟ್ ವಾಪಸ್ – ಹೆದ್ದಾರಿಯಲ್ಲಿ ರಿಟೈನಿಂಗ್ ವಾಲ್ ನಿರ್ಮಾಣಕ್ಕೆ ನಿಧಿ ಬಿಡುಗಡೆ
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ರೆಡ್, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಇದುವರೆಗೂ ಎಲ್ಲೂ ಏನೂ ಸಮಸ್ಯೆ ಆಗಿಲ್ಲ. 2 ತಿಂಗಳಿಂದ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಂಡಿರುವುದರಿಂದ ತುರ್ತು ಸ್ಪಂದನೆ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಈವರೆಗೆ ಜಿಲ್ಲೆಯ 14 ಕಡೆಗಳಲ್ಲಿ ಸಣ್ಣ ಮಟ್ಟದ ಬರೆ ಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 275 ಮತ್ತು ಗ್ರಾಮೀಣ ರಸ್ತೆಗಳಲ್ಲೂ ಕುಸಿತ ಕಂಡುಬಂದಿದೆ. ಎಲ್ಲವನ್ನೂ ಸಮರೋಪಾದಿಯಲ್ಲಿ ಟಾಸ್ಕ್ ಫೋರ್ಸ್ ನಿಭಾಯಿಸಿದೆ. ಮೇ ತಿಂಗಳಿಂದಲೇ ಕೊಡಗಿನಲ್ಲಿ ಟಾಸ್ಕ್ ಫೋರ್ಸ್ ತಂಡ ಬೀಡು ಬಿಟ್ಟಿದ್ದು, ಅಪಾಯಕಾರಿ ಎಂದು ಗುರುತಿಸಲಾದ 13 ಸ್ಥಳಗಳಿಗೆ ಹೋಗಿ ಬಂದಿದೆ.
ಸಣ್ಣ ಪ್ರಮಾಣದಲ್ಲಿ ಕುಸಿದ ಸ್ಥಳಕ್ಕೂ ಎನ್‍ಡಿಆರ್ ಎಫ್ ಭೇಟಿ ಕೊಟ್ಟಿದೆ. ಕಂಟ್ರೋಲ್ ರೂಮ್‍ನಲ್ಲಿ ದೂರುಗಳನ್ನು ಸ್ವೀಕರಿಸಿ ಕೂಡಲೇ ಸಮಸ್ಯೆ ಪರಿಹರಿಸಲಾಗುತ್ತಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವಾಸಿತಾಣ ಮಾಂದಲ್ ಪಟ್ಟಿಯನ್ನು ಅಗಸ್ಟ್ 31 ರ ವರೆಗೆ ಬಂದ್ ಮಾಡಲಾಗಿದೆ.