ತ್ರಿವಳಿ ತಲಾಖ್ ವಿಧೇಯಕಕ್ಕೆ ಲೋಕಸಭೆ ಅಸ್ತು: ಮಸೂದೆಯ ಪರ 303, ವಿರೋಧ 82 ಮತ

Public TV
2 Min Read
students wearing burqas

ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ಸಿಕ್ಕಿದೆ.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಹಿಂದೆ ಎರಡು ಬಾರಿ ತ್ರಿವಳಿ ತಲಾಖ್ ವಿಧೇಯಕ ಮಂಡಿಸಿದ್ದರು. ಆದರೆ  ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ವಿಧೇಯಕ ಬಿದ್ದು ಹೋಗಿತ್ತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಭಾರೀ ಬಹುಮತವಿದೆ. ಹೀಗಾಗಿ ವಿಧೇಯಕ ಅಂಗೀಕಾರವಾಗಿದೆ.

ತ್ರಿವಳಿ ತಲಾಖ್ ಮಸೂದೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ತೀವ್ರವಾದ ವಿರೋಧ ವ್ಯಕ್ತಪಡಿಸಿದವು. ಆದರೆ ಅಂತಿಮವಾಗಿ ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆಯ ಪರ 303 ಮತ್ತು ವಿರೋಧವಾಗಿ 82 ಮತಗಳು ಬಿದ್ದವು. ಈ ಮೂಲಕ ಎನ್‍ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

ಈ ವಿಧೇಯಕದ ಕುರಿತು ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ವಿಶ್ವದ 20 ದೇಶಗಳಲ್ಲಿ ನಿಷೇಧವಾಗಿರುವ ತ್ರಿವಳಿ ತಲಾಖ್ ಪದ್ಧತಿ ನಮ್ಮಲ್ಲೇಕಾಗಬಾರದು? ಇದು ಧರ್ಮಾಧಾರಿತ ಮಸೂದೆಯಲ್ಲ. ಮುಸ್ಲಿಂ ಮಹಿಳೆಯರ ರಕ್ಷಣೆಗೆ, ಲಿಂಗಭೇದ-ತಾರತಮ್ಯ ನಿವಾರಣೆಗೆ ಕೇಂದ್ರದ ಸರ್ಕಾರ ಬಿಲ್ ಜಾರಿಗೆ ತರ್ತಿದೆ ಅಂತ ಬಲವಾಗಿ ವಾದಿಸಿದರು.

ಪ್ರಾದೇಶಿಕ ಪಕ್ಷಗಳು ಈ ಬಾರಿಯೂ ಭಾರೀ ವಿರೋಧ ವ್ಯಕ್ತಪಡಿಸಿ, ತ್ರಿವಳಿ ತಲಾಖ್ ಮಸೂದೆಯಲ್ಲಿ ಕೆಲವು ಅಂಶಗಳು ಅಸಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ ಎಂದು ಪಟ್ಟು ಹಿಡಿದರು.

ರೆವೆಲ್ಯೂಷನರಿ ಸೋಷಲಿಸ್ಟಿಕ್ ಪಕ್ಷದ ಸಂಸದ ಎನ್.ಕೆ ರಾಮಚಂದ್ರನ್ ಮಾತನಾಡಿ, ತ್ರಿವಳಿ ತಲಾಖ್ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಶಿಕ್ಷೆ ನೀಡುತ್ತದೆ. ವಿಚ್ಛೇದನ ಪಡೆದವರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರಿಗೆ ಜೈಲು ಶಿಕ್ಷೆಯಾಗಬೇಕು ಎಂಬ ಕಾನೂನು ರೂಪಿಸಿ ಎಂದು ಒತ್ತಾಯಿಸಿದರು.

ವಿಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ರವಿ ಶಂಕರ್ ಅವರು, ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಕಾಯ್ದೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ. ಕಾಯ್ದೆಯಡಿ ಸಂತ್ರಸ್ತ ಪತ್ನಿ ಅಥವಾ ಆಕೆಯ ರಕ್ತ ಸಂಬಂಧಿ ಪ್ರಕರಣ ದಾಖಲಿಸಿದರೆ ಅಷ್ಟೇ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಬಾನೋ ಎಂಬ ಮಹಿಳೆಗೆ ತ್ರಿವಳಿ ತಲಾಖ್ ನೀಡಲಾಗಿದೆ. ಪತಿ ಹಾಗೂ ಮನೆ ಮಂದಿ ವರದಕ್ಷಿಣೆಗಾಗಿ ಆಕೆಯನ್ನು ಹಿಂಸೆ ಮಾಡುತ್ತಿದ್ದರು. ತ್ರಿವಳಿ ತಲಾಖ್ ಮಹಿಳೆಯ ವೈವಾಹಿಕ ಜೀವನದ ರಕ್ಷಣೆಗೆ ತರಲಾಗುತ್ತಿದೆ ಎಂದು ಪ್ರಸಾದ್ ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *