ಕಾರವಾರ: ದಿಢೀರ್ ಬೆಳವಣಿಗೆಗಳ ನಡುವೆ ಮುಂಬೈನಿಂದ ಕ್ಷೇತ್ರಕ್ಕೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್ ರಾತ್ರೋ ರಾತ್ರಿ ಮತ್ತೆ ಮುಂಬೈಗೆ ಮರಳಿದ್ದಾರೆ.
ತುರ್ತು ಕೆಲಸ ನಿಮಿತ್ತ ಕ್ಷೇತ್ರಕ್ಕೆ ಆಗಮಿಸಿದ್ದ ಶಿವರಾಮ್ ಹೆಬ್ಬಾರ್ ಅವರು ಯಲ್ಲಾಪುರದಲ್ಲಿರುವ ಮನೆಗೆ ಮಾಧ್ಯಮಗಳು ಬರದಂತೆ ನಿರ್ಬಂಧ ಹೇರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಸೇರುವ ಕುರಿತು ಕುಟುಂಬದವರೊಂದಿಗೆ ಹಾಗೂ ಆಪ್ತರೊಂದಿಗೆ ಚರ್ಚೆ ನಡೆಸಿದ್ದರು ಎನ್ನಲಾಗಿತ್ತು.
ಶಾಸಕರು ಸ್ವಗೃಹಕ್ಕೆ ಮರಳಿರುವ ಕುರಿತು ವರದಿ ಪ್ರಸಾರವಾಗುತ್ತಿದ್ದಂತೆ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿ, ನಾನು ತುರ್ತು ಕೆಲಸಕ್ಕೆ ಬಂದಿದ್ದು ನಿಜ. ನಮ್ಮ ಯಾವ ನಿಲುವಿನಲ್ಲಿ ಒಗ್ಗಟ್ಟಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂತಿಮ ನಿರ್ಣಯಕ್ಕೆ ನಾವೆಲ್ಲರೂ ಬಾಧ್ಯಸ್ಥರು. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಕೊಟ್ಟಿದ್ದೇವೆ ನಮ್ಮ ನಿರ್ಣಯವನ್ನು ಸ್ವೀಕರಿಸಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ. ಸೂಕ್ತ ನಿರ್ಣಯ ಸಿಗುತ್ತೆ ಎಂದು ನಂಬಿಕೊಂಡಿದ್ದೇವೆ. ಆ ನಿರ್ಣಯದ ನಂತರ ನಮ್ಮ ನಡೆ ಬಹಿರಂಗ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸೇರುವ ಕುರಿತು ನಮ್ಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರುವ ವದಂತಿ ಬಗ್ಗೆ ಈಗ ಉತ್ತರ ಕೊಡುವುದಿಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ ಅದರ ನಿರ್ಣಯದ ನಂತರ ನಮ್ಮ ನಡೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.
ದೋಸ್ತಿ ಸರ್ಕಾರ ಉರುಳಿದರೂ ಮಹಾರಾಷ್ಟ್ರ ಸೇರಿದ್ದ ಅತೃಪ್ತ ಶಾಸಕರು ಮಾತ್ರ ಸದ್ಯಕ್ಕೆ ವಾಪಸ್ ಬರುವ ನಿರ್ಧಾರವನ್ನು ಮಾಡಿಲ್ಲ. ಸ್ಪೀಕರ್ ಅವರ ಎದುರು ಇರುವ ಅನರ್ಹತೆ ಪ್ರಕರಣಗಳನ್ನು ಅವರು ಇನ್ನೂ ಇತ್ಯರ್ಥ ಮಾಡಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ರಾಜ್ಯಕ್ಕೆ ಬಂದರೆ ಕೈ ನಾಯಕರ ಒತ್ತಡಕ್ಕೆ ಸಿಲುಕಬಹುದು ಎಂಬ ಭಯ ಅತೃಪ್ತರನ್ನು ಕಾಡುತ್ತಿದೆ. ಹೀಗಾಗಿ ಅತೃಪ್ತರು ಪುಣೆ ರೆಸಾರ್ಟಿನಲ್ಲಿಯೇ ಇರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.