ಬೆಂಗಳೂರು: ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ನಿತೀಶ್ ಅಪಾರ್ಟ್‍ಮೆಂಟ್ ನಲ್ಲಿರುವ ವಿಷಯ ತಿಳಿಯುತ್ತಿದ್ದಂತೆ ಇಬ್ಬರಿಗಾಗಿ ನಡುರಸ್ತೆಯಲ್ಲಿ ಹೈಡ್ರಾಮ ನಡೆದಿದೆ.
ನಿತೇಶ್ ಅಪಾರ್ಟ್‍ಮೆಂಟ್ ಮುಂದೆ ಆಗಮಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರರು ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಯಿತು. ಅಪಾರ್ಟ್‍ಮೆಂಟ್ ಪ್ರವೇಶಕ್ಕೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕುಳಿತ ಕೈ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇತ್ತ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿವ ಡಿ.ಕೆ.ಶಿವಕುಮಾರ್, ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ಅವರನ್ನು ವಿಧಾನಸೌಧ ಒಂದು ಕಿ.ಮೀ. ಆಸುಪಾಸಿನಲ್ಲಿಯೇ ಇರಿಸಲಾಗಿದೆ. ನಾನು ಅವರಿಬ್ಬರು ಬರೋದನ್ನು ಕಾಯುತ್ತಿದ್ದೇನೆ. ವಿಧಾನಸೌಧದಲ್ಲಿ ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ನೋಡೋಣ ಎಂದು ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದರು.