ಬೆಂಗಳೂರು: ನನ್ನ ಮೇಲೆ ಒತ್ತಡ ತರಬೇಡಿ. ನನಗೆ ಮುಜುಗರ ಆಗ್ತಿದೆ. ಬೇಗ ಮುಗಿಸಿಬಿಡಿ ಎಂದು ಸ್ಪೀಕರ್ ರಮೇಶ್ ಅವರು ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ.
ಭೋಜನ ವಿರಾಮದ ವೇಳೆ ಕಾಂಗ್ರೆಸ್ ನಾಯಕರು ಸ್ಪೀಕರ್ ಕಚೇರಿಗೆ ತೆರಳಿ ಮಾತನಾಡಿದ್ದಾರೆ. ಈ ವೇಳೆ ಹಂತಹಂತವಾಗಿ ಪ್ರಕ್ರಿಯೆ ಮುಗಿಸಿ ಎಂಬ ನಾಯಕರ ಮನವಿಗೆ ಸ್ಪೀಕರ್ ಬೇಡ್ರಪ್ಪಾ.. ಕೂಡಲೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಿಬಿಡಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚರ್ಚೆ ನಡೆಯುತ್ತಿದೆ. ಸ್ಪೀಕರ್ ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತಿದೆ. ನಾನು, ಸಿಎಂ ಇಬ್ಬರೂ ಸೋಮವಾರ ವಿಶ್ವಾಸಮತ ನಡೆಸೋದಾಗಿ ಹೇಳಿದ್ದೆವು. ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಏನೆಲ್ಲ ಬೆಳವಣಿಗೆಯಾಗಿದೆ ನೋಡಬೇಕು. ಕೆಪಿಜೆಪಿಯ ಶಂಕರ್ ಮತ್ತು ನಾಗೇಶ್ ಸುಪ್ರೀಕೋರ್ಟ್ ಗೆ ಹೋಗಿದ್ದಾರೆ. ನಾಳೆ ವಿಚಾರಣೆಗೆ ಬರಬಹುದು. ವಿಪ್ ವಿಚಾರವಾಗಿ ಗೊಂದಲವಿದ್ದು ಅದೂ ಕೂಡ ನಾಳೆ ವಿಚಾರಣೆಗೆ ಬರಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇವತ್ತು ವಿಶ್ವಾಸಮತ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಮ್ಮ ಶಾಸಕರು ಬಂದರೆ ನಮಗೆ ವಿಶ್ವಾಸ ಮತದಲ್ಲಿ ವೋಟ್ ಹಾಕುತ್ತಾರೆ. ಯಾಕಂದರೆ ಅವರೆಲ್ಲ ಗನ್ ಪಾಯಿಂಟ್ ನಲ್ಲಿದ್ದಾರೆ, ಐನೂರು ಜನ ಪೊಲೀಸರು ಅವರನ್ನ ಕಾಯುತ್ತಿದ್ದಾರೆ. ಬೆದರಿಕೆ ಇಲ್ಲ ಅನ್ನೋದಾದರೆ ಬಾಂಬೆಗೆ ಯಾಕೆ ಹೋಗಬೇಕಿತ್ತು. ಇಲ್ಲೇ ಇದ್ದಿದ್ದರೆ ಅವರಿಗೇನು ಚುಚ್ಚುತ್ತಿತ್ತಾ ಎಂದು ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.