ಚಿಕ್ಕಬಳ್ಳಾಪುರ: ಶಾಸಕ ಡಾ.ಸುಧಾಕರ್ ಅವರನ್ನು ಹುಡುಕಿಕೊಡುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶವರೆಡ್ಡಿ ದೂರು ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೇಶವರೆಡ್ಡಿ ಅವರು, 10 ದಿನದಿಂದ ಚಿಕ್ಕಬಳ್ಳಾಪುರ ಶಾಸಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಬರಗಾಲದಿಂದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಸುಧಾಕರ್ ಅವರು ಯಾರ ಸಂಪರ್ಕಕ್ಕೆ ಸಿಗದಿರುವ ಕಾರಣ ಹಾಗೂ ಜನರ ಸಮಸ್ಯೆಗೆ ಸ್ಪಂದಿಸದ್ದಕ್ಕೆ ಅವರನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸುಧಾಕರ್ ಅವರು ಕ್ಷೇತ್ರಕ್ಕೆ ಬಾರದೇ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಹಾಗಾಗಿ ನಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿರುವ ಕಾರಣ ಸಾರ್ವಜನಿಕರ ಪರವಾಗಿ ಹಾಗೂ ಕ್ಷೇತ್ರದ ಮತದಾರರ ಪರವಾಗಿ ಪಕ್ಷದ ಶಾಸಕರನ್ನು ಹುಡುಕಿಕೊಡಿ ಎಂದು ದೂರು ನೀಡಿದ್ದೇನೆ ಎಂದರು.
ಸಾರ್ವಜನಿಕರು ಶಾಸಕರು ಸಿಗುತ್ತಿಲ್ಲ, ಇಲ್ಲಿ ಸಮಸ್ಯೆ ಇದೆ ಎಂದು ದೂರು ನೀಡಿದ್ದರು. ಹಾಗಾಗಿ ನಮ್ಮ ಪಕ್ಷದ ವರಿಷ್ಠರನ್ನು ಸಂಪರ್ಕಿಸಿದ್ದೇನೆ. ಜಿಲ್ಲೆಯಲ್ಲಿ ಪಕ್ಷದ ಜವಾಬ್ದಾರಿಯನ್ನು ನೀಡಿದ್ದಾರೆ. ಹಾಗಾಗಿ ನಾನು ಜವಾಬ್ದಾರಿಯಿಂದ ದೂರನ್ನು ದಾಖಲಿಸಿದ್ದೇನೆ. ಸುಧಾಕರ್ ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ, ಕ್ಷೇತ್ರಕ್ಕೆ ಬಂದು ಜನರ ಸಮಸ್ಯೆಗೆ ಸ್ಪಂದಿಸಲಿ. ನಮ್ಮ ಪಕ್ಷದಲ್ಲಿ ಅವರು ಶಾಸಕರಾಗಿ ಮುಂದುವರೆಯದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲಿ ಎಂದು ಕೇಶವರೆಡ್ಡಿ ಹೇಳಿದರು.
ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ನಸೀರ್ ಅಹ್ಮದ್ ಎಲ್ಲರೂ ಸುಧಾಕರಿಗೆ ಸ್ನೇಹಿತರು. ವಿಧಾನಸೌಧದಲ್ಲಿ ಯಾವ ಗಲಭೆ ಕೂಡ ಆಗಿಲ್ಲ. ಅವರು ರಾಜೀನಾಮೆ ನೀಡಬೇಡ ಎಂದು ಸುಧಾಕರ್ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದರು.