ಆಕ್ಸಿಡೆಂಟ್ ಮಾಡಿದವ್ರೇ ಸಂತ್ರಸ್ತರಿಗೆ ಪರಿಹಾರ ಕೊಡ್ಬೇಕು

Public TV
3 Min Read
NML ACCIDENT AV 1

– 2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕ
– ವಿಧೇಯಕದಲ್ಲಿ ಏನಿದೆ?
– ಯಾವ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ?

ನವದೆಹಲಿ: ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ವಿರೋಧದ ಮಧ್ಯೆಯೇ ಮೋಟಾರು ವಾಹನ ತಿದ್ದುಪಡಿ ವಿಧೇಯಕ -2019ರಲ್ಲಿ, ಅಪಘಾತ ಎಸೆಗಿದವರೇ ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂಬ ನಿಯಮದ ಬಗ್ಗೆ ಲೋಕಸಭೆಯಲ್ಲಿ ಸೋಮವಾರದಂದು ಮಂಡಿಸಿದೆ.

gurgram

2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ಭಾರಿ ದಂಡ ವಿಧಿಸಲಾಗುತ್ತೆ. ಹಾಗೆಯೇ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಿಗೆ ಹಾಗೂ ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡುವುದು, ಮಾನವೀಯ ದೃಷ್ಟಿಯಲ್ಲಿ ಗಾಯಾಳುಗಳ ಸಹಾಯಕ್ಕೆ ಬರುವ ಸಾರ್ವಜನಿಕರಿಗೆ ಪೊಲೀಸ್ ವಿಚಾರಣೆಯ ಕಿರಿಕಿರಿಯಿಂದ ವಿನಾಯಿತಿ ನೀಡುವುದು, ಹೀಗೆ ಹಲವು ಸುಧಾರಣಾ ಕ್ರಮಗಳ ಬಗ್ಗೆ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.

Parliment

ಈ ಹಿಂದಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 1988ರ ಮೋಟಾರು ವಾಹನ ಕಾಯ್ದೆಯನ್ನು ಪರಿಷ್ಕರಿಸುವ `ಮೋಟಾರು ವಾಹನ ತಿದ್ದುಪಡಿ ವಿಧೇಯಕ’ಕ್ಕೆ ಲೋಕಸಭೆ ಅನುಮೋದನೆ ದೊರಕಿತ್ತು. ಆದರೆ ರಾಜ್ಯಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. ಹೀಗಾಗಿ ಈ ಭಾರಿಯಾದರೂ ಈ ತಿದ್ದುಪಡಿ ಕಾರ್ಯರೂಪಕ್ಕೆ ಬರಲಿ ಎಂಬ ನಿಟ್ಟಿನಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯ ಹಲವು ಶಿಫಾರಸುಗಳನ್ನು ಪರಿಗಣಿಸಿ ರಸ್ತೆ ಸಾರಿಗೆ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್ ಅವರು ವಿಧೇಯಕವನ್ನು ಮತ್ತೊಮ್ಮೆ ಲೋಕಸಭೆಯಲ್ಲಿ ಮಂಡಿಸಿದರು.

vk singh

ವಿಧೇಯಕದಲ್ಲಿ ಏನಿದೆ?
ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತರಿಗೆ ವಾಹನ ಮಾಲೀಕರು/ವಿಮೆದಾರರಿಂದ ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. ಒಂದು ವೇಳೆ ಗಂಭೀರವಾಗಿ ಗಾಯಗೊಂಡವರಿಗೆ ಅಪಘಾತ ಮಾಡಿದವರೇ 2.5 ಲಕ್ಷ ರೂ. ಕನಿಷ್ಠ ಆರ್ಥಿಕ ನೆರವನ್ನು ನೀಡಬೇಕು. ಹಾಗೆಯೇ ವಾಹನ ಪರವಾನಗಿ ನವೀಕರಣದ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಸಲಾಗಿದೆ. ಜೊತೆಗೆ ವಿಶೇಷ ಚೇತನರಿಗೆ ಲೈಸೆನ್ಸ್ ನೀಡಲು ಸಾರಿಗೆ ಇಲಾಖೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎನ್ನುವ ಬಗ್ಗೆ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

signal

ಯಾವ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ?
ಚಾಲನಾ ಪರವಾನಗಿ (ಡಿಎಲ್) ಇಲ್ಲದೆ ವಾಹನ ಚಲಾಯಿಸುವವರಿಗೆ 5,000 ರೂ. ದಂಡ ವಿಧಿಸಲಾಗುವುದು. ಹಾಗೆಯೇ ರಸ್ತೆಯಲ್ಲಿ ಸಾಗುವಾಗ ಆಂಬ್ಯುಲೆನ್ಸ್‍ಗೆ ದಾರಿ ಬಿಡದ ವಾಹನ ಸವಾರರಿಗೆ 10,000 ರೂ. ದಂಡ ಹಾಕಲಾಗುತ್ತದೆ. ಅತಿ ವೇಗದ ಚಾಲನೆಗೆ 2,000 ರೂ. ದಂಡ, ಹೆಲ್ಮೆಟ್ ಹಾಕದೆ ದ್ವಿಚಕ್ರ ಚಲಾಯಿಸಿದರೆ 1,000 ರೂ. ದಂಡದ ಜೊತೆಗೆ 3 ತಿಂಗಳು ಡಿಎಲ್ ರದ್ದುಗೊಳಿಸಲಾಗುತ್ತದೆ. ಜೊತೆಗೆ ವಿಮೆ ಇಲ್ಲದೆ ವಾಹನ ಓಡಿಸಿದರೆ 2,000 ರೂ. ಹಾಗೂ ಕುಡಿದು ವಾಹನ ಚಲಾವಣೆ( ಡ್ರಿಂಕ್ ಆ್ಯಂಡ್ ಡ್ರೈವ್) ಮಾಡಿದರೆ 10,000 ರೂ. ದಂಡ ಕಟ್ಟಬೇಕು ಎಂದು ಮೋಟಾರು ವಾಹನ ತಿದ್ದುಪಡಿ ವಿಧೇಯಕ -2019ದಲ್ಲಿ ತಿಳಿಸಲಾಗಿದೆ.

traffic police

ಆದರೆ ಲೋಕಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ತೃಣಮೂಲ ಕಾಂಗ್ರೆಸ್ ಸದಸ್ಯ ಸೌಗತ್ ರಾಯ್ ಸೇರಿದಂತೆ ಹಲವರು ಈ ವಿಧೇಯಕದಲ್ಲಿರುವ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

ಆಗ ವಿರೋಧಗಳಿಗೆ ಪ್ರತಿಕ್ರಿಯಿಸಿದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಸರ್ಕಾರ ತಿದ್ದುಪಡಿ ವಿಧೇಯಕದ ಕರಡು ಸಿದ್ಧಪಡಿಸುವ ಮುಂಚೆಯೇ 18 ರಾಜ್ಯಗಳ ಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಅಲ್ಲದೆ ಈ ಬಿಲ್ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವುದಿಲ್ಲ. ಕಾಯ್ದೆಯನ್ನು ಜಾರಿಗೊಳಿಸುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಸ್ಪಷ್ಟನೆ ನೀಡಿದರು. ಅಷ್ಟೇ ಅಲ್ಲದೇ ವಿಧೇಯಕ ಜಾರಿಗೆ ತರಲು ಸರ್ಕಾರಕ್ಕೆ ಸಹಕರಿಸಿ ಎಂದು ಪ್ರತಿಪಕ್ಷಗಳ ನಾಯಕರಲ್ಲಿ ಮನವಿ ಮಾಡಿಕೊಂಡರು.

NITHIN GADKARI

ಬಳಿಕ ಮಾತನಾಡಿ, ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸುಮಾರು 1.5 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. 5 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಳ್ಳುತ್ತಾರೆ. ಹಾಗೆಯೇ ದೇಶದಲ್ಲಿ ಶೇ. 30ರಷ್ಟು ಡ್ರೈವಿಂಗ್ ಲೈಸನ್ಸ್ ಬೋಗಸ್ ಆಗಿದೆ ಎಂದು ಹೇಳಿದರು.

ಅಲ್ಲದೆ ಕಳೆದ 5 ವರ್ಷಗಳಲ್ಲಿ ಈ ತಿದ್ದುಪಡಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ವಿಫಲವಾಗಿದೆ. ಆದರೆ ಕಳೆದ 5 ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಶೇ.15ರಷ್ಟು ಅಪಘಾತಗಳು ಕಡಿಮೆಯಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *