ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣ ಇತ್ಯರ್ಥ

Public TV
3 Min Read
Abhishek Manu Singhvi 1

– ಸುಪ್ರೀಂಗೆ ಮಾಹಿತಿ ಕೊಟ್ಟ ಸಿಂಘ್ವಿ

ನವದೆಹಲಿ: ವಿಶ್ವಾಸ ಮತ ಯಾಚನೆಯ ಮುನ್ನದಿನವಾದ ಬುಧವಾರ ಶಾಸಕರ ರಾಜೀನಾಮೆ ಮತ್ತು ಅನಹರ್ತತೆ ವಿಚಾರವನ್ನು ಸ್ಪೀಕರ್ ರಮೇಶ್ ಕುಮಾರ್ ಇತ್ಯರ್ಥ ಮಾಡಲಿದ್ದಾರೆ.

ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾ.ದೀಪಕ್ ಗುಪ್ತಾ, ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಸ್ಪೀಕರ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ ಬುಧವಾರ ಅನಹರ್ತತೆ ಮತ್ತು ರಾಜೀನಾಮೆಯನ್ನು ಇತ್ಯರ್ಥ ಮಾಡಲಿದ್ದಾರೆ ಎಂದು ತಿಳಿಸಿದರು.

Abhishek Manu Singhvi

ಅಭಿಷೇಕ್ ಮನು ಸಿಂಘ್ವಿ ವಾದ ಹೀಗಿತ್ತು:
ಸ್ಪೀಕರ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಕೆಲವರನ್ನು ವಿಚಾರಣೆಗೂ ಕೂಡ ಕರೆದಿದ್ದಾರೆ. ಆದರೆ ಅವರು ವಿಚಾರಣೆಗೆ ಬಂದಿಲ್ಲ. ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರಕ್ಕೆ ಸಂಬಂಧ ಇಲ್ಲ ಎನ್ನುವುದು ತಪ್ಪು. ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧವಿದೆ.

ರಾಜೀನಾಮೆಗಿಂತ ಮುಂಚೆಯೇ ಅನರ್ಹತೆಯ ದೂರು ಸಲ್ಲಿಕೆಯಾಗಿದೆ. ವಿಪ್ ಉಲ್ಲಂಘಿಸಿದರೆ ಅದು ಅನರ್ಹತೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ರಾಜೀನಾಮೆ ಅನರ್ಹತೆ ಬಗ್ಗೆ ನಿರ್ಧಾರಕೈಗೊಳ್ಳುವ ಅಧಿಕಾರ ಸ್ವೀಕರ್ ಅವರಿಗೆ ಇದೆ. ವಿಪ್ ಉಲ್ಲಂಘನೆ ಮಾಡಿದರೆ ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರವನ್ನು ಸ್ಪೀಕರ್ ಹೊಂದಿದ್ದಾರೆ. ಪಕ್ಷ ವಿರೋಧ ಚಟುವಟಿಕೆ ಆಧಾರದ ಮೇಲೆ ಅನರ್ಹತೆ ಮಾಡಬೇಕು. ಪಕ್ಷ ವಿರೋಧಿ ಚಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದೇ ರಾತ್ರಿಯಲ್ಲಿ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಮುಕುಲ್ ರೋಹಟಗಿ ಅವರ ವಾದದಲ್ಲಿ ಹುರುಳಿಲ್ಲ. ತ್ವರಿತವಾಗಿ ರಾಜೀನಾಮೆ ಅಂಗೀಕರಿಸುವುದು ಸೂಕ್ತ ತೀರ್ಮಾನವಲ್ಲ.

ಅನರ್ಹತೆ ಪ್ರಶ್ನೆಯೂ ಅನರ್ಹತೆಗೆ ದೂರು ನೀಡಲು ಕಾರಣವಾದ ಘಟನೆ ಮತ್ತು ಸಮಯವನ್ನು ಆಧರಿಸಿರುತ್ತದೆ. ನಿಯಮದ ಪ್ರಕಾರ ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಬೇಕು. ಖುದ್ದು ಹಾಜರಾಗದೇ ರಾಜೀನಾಮೆ ನೀಡಿದರೆ ಆರ್ಟಿಕಲ್ 190ರ ಅನ್ವಯ ಆಗಲ್ಲ. ವಿಚಾರಣೆಗೂ ಕೂಡ ಶಾಸಕರು ಖುದ್ದು ಹಾಜರಾಗಬೇಕು. ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಪೂರ್ಣ ಮಾಡಬೇಕಾಗಿರುವ ಕಾರಣ ಒಂದೇ ರಾತ್ರಿಯಲ್ಲಿ ವಿಚಾರಣೆ ಮುಗಿಸಲು ಸಾಧ್ಯವಿಲ್ಲ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಾಸಕರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಜುಲೈ 11ರಂದು 15 ಶಾಸಕರಲ್ಲಿ 11 ಮಂದಿ ಖುದ್ದು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಉಳಿದ ನಾಲ್ವರು ಇದೂವರೆಗೂ ಬಂದಿಲ್ಲ.

ಆರಂಭದಲ್ಲಿ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲ. ತದನಂತರ ಸಲ್ಲಿಸಿದ ರಾಜೀನಾಮೆ ಕ್ರಮಬದ್ಧವಾಗಿದೆ. ಫೆಬ್ರವರಿಯಲ್ಲಿ ಇಬ್ಬರು ಶಾಸಕರ ಅನರ್ಹತೆ ವಿಚಾರಣೆ ಪ್ರಕ್ರಿಯೆ ಶುರುವಾಗಿದೆ. ಜುಲೈ 6ರಂದು ಶಾಸಕರು ರಾಜೀನಾಮೆ ನೀಡಲು ಹೋದಾಗ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಶಾಸಕರು ಮೊದಲು ಸ್ಪೀಕರ್ ಬಳಿ ಸಮಯ ಕೇಳಿರಲಿಲ್ಲ. ಅನರ್ಹತೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಹಲವು ಅನರ್ಹತೆ ಪ್ರಕರಣಗಳನ್ನು ಪರಿಶೀಲಿಸಿ ತೀರ್ಪು ನೀಡಬೇಕಿದೆ. ಹಾಗಾಗಿ ತಡವಾಗ್ತಿದೆ. ನಾನು ಬಹಳ ಗಟ್ಟಿಯಾಗಿ ಶಾಸಕರು ಅನರ್ಹರಾಗುತ್ತಾರೆಂದು ಹೇಳುತ್ತೇನೆ. ಇವತ್ತಲ್ಲ ನಾಳೆ ಅನರ್ಹತೆ ಆಗಲೇಬೇಕು. ಅನರ್ಹತೆ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗ ಆಗಬಾರದು. ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣವನ್ನು ಸ್ಪೀಕರ್ ಇತ್ಯರ್ಥ ಮಾಡುತ್ತಾರೆ. ಶುಕ್ರವಾರ ನೀಡಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡರು.

ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಗಡುವು ನೀಡುವಂತಿಲ್ಲ. ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡುವಂತಿಲ್ಲ. 2018 ಮೇ ತಿಂಗಳಲ್ಲಿ ಸರ್ಕಾರ ರಚನೆಯಾದಾಗ ಸ್ಪೀಕರ್ ಗೆ ಸುಪ್ರೀಂ ಯಾವುದೇ ನಿರ್ದೇಶನ ನೀಡಿರಲಿಲ್ಲ. ರಾಜೀನಾಮೆ ವಿಚಾರದಲ್ಲಿ ಬಿಜೆಪಿ ನಾಯಕರ ಪಾತ್ರ ಇದೆ. ಬಿಎಸ್ ಯಡಿಯೂರಪ್ಪ ಆಪ್ತ ಸಂತೋಷ್, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಹೆಸರನ್ನು ಪ್ರಸ್ತಾಪಿಸಿ, ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ನಾಯಕರೊಂದಿಗೆ ಒಡನಾಟ ಹೊಂದಿದ್ದಾರೆ ಎಂದು ಸಿಂಘ್ವಿ ವಾದಿಸಿದರು.

ಸಿಜೆಐ ಪ್ರಶ್ನೆ:
ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ತಡವಾಗಲು ಕಾರಣವೇನು? ರಾಜೀನಾಮೆಯನ್ನು ಸರ್ಕಾರ ತಡೆಯುತ್ತಿದ್ಯಾ? ಮೊದಲು ರಾಜೀನಾಮೆ ಇತ್ಯರ್ಥಪಡಿಸಿ ನಂತರ ಅನರ್ಹತೆಯನ್ನು ತೆಗೆದುಕೊಳ್ಳಿ ಎಂದು ನಮ್ಮ ಕಾರ್ಯವ್ಯಾಪ್ತಿಯನ್ನು ಪ್ರಶ್ನೆ ಮಾಡಬೇಡಿ ಎಂದು ಸಿಜೆಐ ಪ್ರಶ್ನೆ ಮಾಡಿದರು. ಈ ಹಿಂದೆ 24 ಗಂಟೆಯ ಒಳಗಡೆ ವಿಶ್ವಾಸ ಮತಯಾಚನೆ ನಡೆಸಲು ಸೂಚನೆ ನೀಡಿ ಎಂದು ನಾವು ರಾಜ್ಯಪಾಲರಿಗೆ ನೀಡಿದ ಆದೇಶವನ್ನು ನೀವು ಒಪ್ಪಿಕೊಂಡಿದ್ದರೆ ಈಗ ಯಾಕೆ ಪ್ರಶ್ನೆ ಮಾಡುತ್ತೀರಿ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಪ್ರಶ್ನೆ ಮಾಡಿದರು.

ಬೆಳಗ್ಗೆ 10.52ಕ್ಕೆ ವಿಚಾರಣೆ ಆರಂಭಗೊಂಡಿದ್ದು, ಮೊದಲು ರಾಜೀನಾಮೆ ಸಲ್ಲಿಸಿದ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡಿಸಿದರು. ಇದಾದ ಬಳಿಕ ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ದೀರ್ಘ ವಿಚಾರಣೆ ನಡೆಸಿದ ಪೀಠ ಭೋಜನ ವಿರಾಮದ ನಂತರವೂ ವಾದವನ್ನು ಆಲಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *