ಬೆಂಗಳೂರು: ಬಹುಮತ ಇಲ್ಲ ಅಂದ್ಮೇಲೆ ಸೈಲೆಂಟಾಗಿ ಮನೆಯಲ್ಲಿ ಇರಬೇಕಿತ್ತು. ಜನ ತಿರಸ್ಕಾರ ಮಾಡಿದರೂ ಬಲವಂತವಾಗಿ ಹಿಂಬಾಗಿಲಿಂದ ಕಾಂಗ್ರೆಸ್- ಜೆಡಿಎಸ್ ಅಪಮೈತ್ರಿ ಮಾಡಿಕೊಂಡಿತು ಎಂದು ಕೋಲಾರ ಸಂಸದ ಮುನಿಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೊದಲೇ ಸರ್ಕಾರಕ್ಕೆ ಬಹುಮತ ಇರಲಿಲ್ಲ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ ಹೀಗಾಗಿ ಮತ್ತೆ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಒಳ್ಳೆ ಸರ್ಕಾರ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್- ಜೆಡಿಎಸ್ ನಾಯಕರು ಅವರಾಗಿ ಅವರೇ ಜಗಳ ಮಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ನಾವು ಯಾರನ್ನೂ ಕರೆದಿಲ್ಲ. ನಾವೇನು ಕೈಲಾಗದಿದ್ದವರು ಅಲ್ಲ, ಅವಕಾಶ ಸಿಕ್ಕಾಗ ಸರ್ಕಾರ ರಚನೆಗೆ ಹೈಕಮಾಂಡ್ ಹಾಗೂ ಯಡಿಯೂರಪ್ಪ ಸಿದ್ಧರಿದ್ದಾರೆ. ಅದಕ್ಕಾಗಿಯೇ ಅವಕಾಶ ಒಲಿದು ಬಂದಾಗ ಸರ್ಕಾರ ರಚನೆ ಮಾಡಿಯೇ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಎಸ್‍ವೈಗೆ ಕೊಡುಗೆ ನೀಡುವ ಬಗ್ಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ನಮ್ಮ ಕೋಲಾರದಿಂದ 5-6 ಮಂದಿ ಶಾಸಕರನ್ನು ಗೆಲ್ಲಿಸಿ ಪಕ್ಷಕ್ಕೆ ಕೊಡುಗೆಯಾಗಿ ನೀಡುತ್ತೇನೆ. ಬಿಜೆಪಿ ಅಭಿವೃದ್ಧಿ ಕೆಲಸಕ್ಕೆ ಮೆಚ್ಚಿ ಸಾಕಷ್ಟು ಮಂದಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಅಂದ ಮೇಲೆ ಅದರಲ್ಲಿ ಏನು ತಪ್ಪಿದೆ? ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರ ಕೆಲಸ ನೋಡಿ ನಮ್ಮ ಪಕ್ಷಕ್ಕೆ ಸೇರುವವರ ಆಸಕ್ತಿ ಹೆಚ್ಚಾಗಿದೆ ಎಂದು ಮುನಿಸ್ವಾಮಿ ಹೇಳಿದರು.