ನಾವು ಅಪ್‍ಡೇಟ್ ಆಗಬೇಕು, ಇಲ್ಲದಿದ್ದರೆ ಹಿಂದೆ ಬೀಳುತ್ತೇವೆ: ತೇಜಸ್ವಿನಿ ಅನಂತ್‍ಕುಮಾರ್

Public TV
2 Min Read
Tejaswini Ananth Kumar T G Srinidhi Rangaswamy Mookanahalli

ಬೆಂಗಳೂರು: ವಿಜ್ಞಾನ ಕ್ಷೇತ್ರ ಇಂದು ಬಹಳ ವೇಗದಲ್ಲಿ ಬೆಳೆಯುತ್ತಿದೆ. ಹೀಗಾಗಿ ನಾವು ಅಪ್‍ಡೇಟ್ ಆಗುತ್ತಲೇ ಇರಬೇಕು. ಇಲ್ಲದಿದ್ದರೆ ಹಿಂದೆ ಬೀಳಬೇಕಾಗುತ್ತದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಟಿ. ಜಿ. ಶ್ರೀನಿಧಿಯವರ ‘ಟೆಕ್ ಲೋಕದ ಹತ್ತು ಹೊಸ ಮುಖಗಳು’ ಮತ್ತು ರಂಗಸ್ವಾಮಿ ಮೂಕನಹಳ್ಳಿಯವರ ‘ವಿತ್ತಜಗತ್ತು: ತಿಳಿಯಬೇಕಾದ ವಿಷಯ ಹಲವು ಹತ್ತು’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಾನು ಎಂಜಿನಿಯರಿಗ್ ವಿದ್ಯಾರ್ಥಿನಿ. 1996ರಲ್ಲಿ ಪೇಜರ್ ಬಂದಾಗ ಆರಂಭದಲ್ಲಿ ಅದು ಏನು ಎನ್ನುವುದೇ ಗೊತ್ತಿರಲಿಲ್ಲ. ನಂತರ ಮೊಬೈಲ್ ಬಂತು. ಈಗ ಎಷ್ಟು ಮುಂದುವರಿದಿದೆ ಎಂದರೆ ಜೋಧ್‍ಪುರದಲ್ಲಿರುವ ಅಧಮ್ಯ ಚೇತನದಲ್ಲಿ ಹೇಗೆ ಕೆಲಸ ನಡೆಯುತ್ತಿದೆ ಎನ್ನುವುದು ಮೊಬೈಲಿನಲ್ಲೇ ತಿಳಿಯುತ್ತೇವೆ. ಆಹಾರ ಹೇಗೆ ತಯಾರಾಗುತ್ತದೆ. ಸರಿಯಾದ ಸ್ಥಳಕ್ಕೆ ಡ್ರೈವರ್ ಆಹಾರ ತಲುಪಿಸಿದ್ದಾನೋ ಇಲ್ಲವೋ ಎನ್ನುವುದು ಜಿಪಿಎಸ್ ಮೂಲಕ ಗೊತ್ತಾಗುತ್ತದೆ. ಇದಕ್ಕಾಗಿ ಮೊಬೈಲ್ ತಂತ್ರಜ್ಞಾನಕ್ಕೆ ದೊಡ್ಡ ಕ್ರೆಡಿಟ್ ನೀಡಬೇಕು ಎಂದರು.

T G Srinidhi book

ಹಿಂದೆ ವಿದೇಶಕ್ಕೆ ಹೋದಾಗ ಭಾರತೀಯರನ್ನು ಏನೋ ಒಂದು ಥರ ನೋಡುತ್ತಿದ್ದರು. ಆದರೆ ಈಗ ಭಾರತ ಬದಲಾಗಿದೆ. ನೀವು ಭಾರತದವರೇ ಎಂದು ಕೇಳುವ ಮಟ್ಟಕ್ಕೆ ತಲುಪಿದ್ದೇವೆ. ಸರ್ಕಾರದ ಸಾಧನೆ ಸೇರಿದಂತೆ ಜಿಡಿಪಿಗೆ ಬೆಂಗಳೂರಿನ ಕೊಡುಗೆಯೂ ಇದೆ ಎಂದು ತೇಜಸ್ವಿನಿ ಅನಂತ್‍ಕುಮಾರ್ ತಿಳಿಸಿದರು.

ನಮ್ಮ ಜೀವನದಲ್ಲಿ ಪ್ಲಾಸ್ಟಿಕ್ ಹೇಗೆಲ್ಲ ಬಳಕೆಯಾಗುತ್ತದೆ ಎನ್ನುವುದನ್ನು ವಿವರಿಸಿದ ಅವರು, ಬಹಳಷ್ಟು ಜನ ಹಾಲಿನ ಪ್ಯಾಕೆಟ್ ಎರಡು ಬದಿಯನ್ನು ಕತ್ತರಿಸುತ್ತಾರೆ. ಈ ರೀತಿ ಕತ್ತರಿಸದೇ ಒಂದು ಬದಿ ಮಾತ್ರ ಕತ್ತರಿಸಬೇಕು. ಈ ರೀತಿ ಕತ್ತರಿಸಿದಾಗ ಸಣ್ಣ ತುಂಡು ತ್ಯಾಜ್ಯವಾಗುವುದಿಲ್ಲ. ಈ ಮೂಲಕ ಪರಿಸರ ರಕ್ಷಣೆಯಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ವಸುಧೇಂದ್ರ ಮಾತನಾಡಿ, ಆಂಗ್ಲ ಮಾಧ್ಯಮದಲ್ಲಿ ಸಾಕಷ್ಟು ಪುಸ್ತಕಗಳು ಬರುತ್ತವೆ. ಆದರೆ ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನದ ಬಗ್ಗೆ ಬರೆಯುವವರು ಕಡಿಮೆ. ಆದರಲ್ಲೂ ಐಟಿ ಒಳಗಡೆ ಕನ್ನಡ ಬರುವುದೇ ವಿಶೇಷ. ಹೀಗಿರುವಾಗ ಶ್ರೀನಿಧಿ ಅವರು ಸರಳವಾಗಿ ಕನ್ನಡದಲ್ಲಿ ಮಾಹಿತಿಯನ್ನು ತಿಳಿಸುತ್ತಿರುವುದು ಶ್ಲಾಘನೀಯ ಎಂದರು.

ಪುಸ್ತಕಗಳು ಪ್ರಕಟಗೊಂಡಾಗ ಒಂದು ಸಮಾಜ ಸುಶಿಕ್ಷಿತ ಸಮಾಜ ಎಂದು ಗುರುತಿಸಿಕೊಳ್ಳುತ್ತದೆ. ಅಲ್ಲಾವುದ್ದೀನ್ ಖಿಲ್ಜಿ ದಾಳಿಯಾದ ಸುಮಾರು 50 ವರ್ಷಗಳ ಕಾಲ ಕನ್ನಡದಲ್ಲಿ ಒಂದೇ ಒಂದು ಕೃತಿ ಪ್ರಕಟಗೊಂಡಿರಲಿಲ್ಲ. ನಂತರ ಪುಸ್ತಕ ಪ್ರಕಟಗೊಂಡಿದ್ದು ವಿಜಯನಗರ ಅರಸರ ಕಾಲದಲ್ಲಿ ಎನ್ನುವ ವಿಚಾರವನ್ನು ಹಂಚಿಕೊಂಡರು.

Rangaswamy Mookanahalli Book

ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ) ಮುಂದೊಂದು ದಿನ ಆಳುವ ದಿನ ಬರಬಹುದು. ಎಐ ಸರಿಯಾಗಿ ಕೆಲಸ ಮಾಡಬೇಕಾದರೆ ಮನುಷ್ಯನ ಮೆದುಳು ಬಹಳ ಮುಖ್ಯಪಾತ್ರ ವಹಿಸುತ್ತದೆ. ಎಲ್ಲಕ್ಕಿಂತಲೂ ದೊಡ್ಡ ಕಂಪ್ಯೂಟರ್ ಎಂದರೆ ಅದು ಮನುಷ್ಯನ ಮೆದುಳು ಎಂದು ಅಭಿಪ್ರಾಯಪಟ್ಟರು.

ಜೀವನದಲ್ಲಿ ಹಣ ಬಹಳ ಮುಖ್ಯ ಪಾತ್ರವವಹಿಸುತ್ತದೆ. ಆಸಕ್ತಿ ಇರುವವರು ಹೇಗೂ ಓದುತ್ತಾರೆ. ವಿತ್ತದ ಬಗ್ಗೆ ಆಸಕ್ತಿ ಇಲ್ಲ ಎಂದು ನಾವು ಈ ಕ್ಷೇತ್ರವನ್ನು ಕಡೆಗಣಿಸಬಾರದು. ಸರಸ್ವತಿಯನ್ನು ಪೂಜೆ ಮಾಡುವಾಗ ಲಕ್ಷ್ಮೀಯನ್ನು ಅಲಕ್ಷ್ಯ ಮಾಡುವಂತಿಲ್ಲ ಎಂದು ಹೇಳಿದರು.

ಪುಸ್ತಕ ಬಿಡುಗಡೆ ಸಮಾರಂಭವನ್ನು ಇಜ್ಞಾನ ಫೇಸ್‍ಬುಕ್ ಪೇಜ್ ಲೈವ್ ಮಾಡಿದ್ದು, ಇಲ್ಲಿ ನೀಡಲಾಗಿದೆ. ಗಣ್ಯರ ಸಂಪೂರ್ಣ ಮಾತುಗಳನ್ನು ಕೇಳಬಹುದು.

Share This Article
Leave a Comment

Leave a Reply

Your email address will not be published. Required fields are marked *