ಮಂಗಳೂರು: ಕೆಎಸ್ಆರ್‌ಟಿಸಿ ಬಸ್ ಮತ್ತು ರಿಟ್ಜ್ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ನಡೆದಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಮಂಜುಳಾ, ಸೋಮಣ್ಣ ಮತ್ತು ನಾಗೇಂದ್ರ ಎಂದು ಗುರುತಿಸಲಾಗಿದೆ. ಮಂಜುಳಾ ಅವರು ಸ್ಥಳದಲ್ಲೇ ಮೃತಪಟ್ಟರೆ ತೀವ್ರವಾಗಿ ಗಾಯಗೊಂಡಿದ್ದ ಸೋಮಣ್ಣ ಮತ್ತು ನಾಗೇಂದ್ರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೃತ ನಾಗೇಂದ್ರ ಅವರ ಮಗ ಪೂರ್ವಿಕ್ ಸುಳ್ಯದ ಚೊಕ್ಕಾಡಿ ಸತ್ಯ ಸಾಯಿ ಸಂಸ್ಥೆಯಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದು, ಮಗನನ್ನು ನೋಡಲೆಂದು ಭಾನುವಾರ ತೆರಳುತ್ತಿದ್ದಾಗ ಅಪಘಾತ ನಡೆದಿದೆ.
ಶಾಲೆಗೆ ತಲುಪಲು ಇನ್ನೂ ಕೇವಲ 15 ಕಿ.ಮೀ ಇರುವಾಗ, ರಿಕ್ಷಾವನ್ನು ಓವರ್ ಟೇಕ್ ಮಾಡಲು ಹೋಗಿ ಬಸ್ಸಿಗೆ ಕಾರ್ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.