ಬೆಂಗಳೂರು: ಕಾಂಗ್ರೆಸ್ ಘಟಾನುಘಟಿ ನಾಯಕರ ಮನವೊಲಿಕೆಗೂ ಬಗ್ಗದ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಇದೀಗ ಏಕಾಏಕಿ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಈ ವಿಚಾರ ತಿಳಿದು ಸಿಎಂ ಅವರಿಗೆ ಶಾಕ್ ಆಗಿದೆ. ಪರಿಣಾಮ ವಿಶ್ವಾಸ ಮತಯಾಚನೆಯ ನಿರೀಕ್ಷೆಯಲ್ಲಿದ್ದ ಸಿಎಂ ಈಗ ಫುಲ್ ಟೆನ್ಶನ್ ಆಗಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ, ಇಂದು ನನಗೆ ಸ್ವಲ್ಪ ಪರ್ಸನಲ್ ಕೆಲಸ ಇದೆ. ದೇವಸ್ಥಾನಕ್ಕೆ ಹೋಗಬೇಕು ಎಂದಿದ್ದರು. ಇದೇ ವೇಳೆ ನಾನು ಯಾವುದೇ ಕಾರಣಕ್ಕೂ ಮುಂಬೈಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದೀಗ ದಿಢೀರ್ ಆಗಿ ಎಂಟಿಬಿ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿದ್ದಾರೆ.
ಶನಿವಾರದ ಮನವೊಲಿಕೆಯಲ್ಲಿ ಎಂಟಿಬಿ ತಮ್ಮ ರಾಜೀನಾಮೆ ವಾಪಸ್ ಪಡೆಯುತ್ತೇನೆ. ಆದರೆ ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದರು. ಸಿಎಂ ಅವರು ಕೂಡ ನಿನ್ನೆ ರಾತ್ರಿ ಕರೆ ಮಾಡಿ ಮಾತುಕತೆ ನಡೆಸಿದ್ದರು. ಹೀಗಾಗಿ ಎಂಟಿಬಿ ಅವರು ವಾಪಸ್ ಬರುತ್ತಾರೆ ಎಂದು ನಂಬಿದ್ದ ಸಿಎಂ ಅವರಿಗೆ ಈ ವಿಚಾರ ತಿಳಿದು ಆತಂಕ ಉಂಟಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ನಿನ್ನೆ ರಾತ್ರಿವರೆಗೂ ಎಂಟಿಬಿ ಅವರನ್ನು ಸಮಾಧಾನ ಮಾಡಿ ಬಂದಿದ್ದ ಸಿಎಂ, ಇಂದು ಎಂಟಿಬಿ ಮುಂಬೈ ಫ್ಲೈಟ್ ಹತ್ತಿದ್ದ ವಿಚಾರ ತಿಳಿದು ಶಾಕ್ ಆಗಿದ್ದಾರೆ. ನಿನ್ನೆಯಷ್ಟೇ ವಾಪಸ್ ಬರುವುದಾಗಿ ಹೇಳಿದ್ದ ಎಂಟಿಬಿ, ಇಂದು ಅತೃಪ್ತರ ಬಣ ಸೇರ್ಪಡೆ ಹಿನ್ನೆಲೆಯಲ್ಲಿ ಸುಮಾರು 15 ಗಂಟೆಗಳ ಕಾಲ ಡಿಕೆ ಶಿವಕುಮಾರ್ ಹಾಗು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಪ್ರಯತ್ನ ಈ ಮೂಲಕ ವ್ಯರ್ಥವಾಗಿದೆ.
ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿ ಇದ್ದಂತೆಯೇ ಇಂದು ಮಾರ್ಗ ಮಧ್ಯದಲ್ಲಿ ವಾಹನ ಬದಲಿಸಿದ ಎಂಟಿಬಿ ನಾಗರಾಜ್, ಸತೀಶ್ ರೆಡ್ಡಿ ಅವರ ಕಾರಿನಲ್ಲಿ ಹೆಚ್‍ಎಎಲ್‍ಗೆ ಹೋಗಿ ಆರ್.ಆಶೋಕ್ ನೇತೃತ್ವದಲ್ಲಿ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿದ್ದಾರೆ.