ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ ಎಂದು ಇಂದು ಮುಂಜಾನೆ ಸುದ್ದಿ ಪ್ರಸಾರವಾಗಿತ್ತು. ಆದರೆ ಇದೀಗ ಬಿಎಸ್‍ವೈ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಜೆಪಿ ಸೇರ್ಪಡೆಯ ವಿಚಾರವನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಏನೇನೊ ಬರುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಬರುತ್ತಾರೆ ಎಂದು ಸುದ್ದಿ ಬರುತ್ತಿದೆ. ನಮಗೆ ಏನು ತಲೆ ಕೆಟ್ಟಿದೆಯಾ, ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಮುನಿಸಿಕೊಂಡೇ ಅವರೆಲ್ಲಾ ಮುಂಬೈಗೆ ಹೋಗಿದ್ದಾರೆ. ಆದ್ದರಿಂದ ಅವರು ಬಿಜೆಪಿಗೆ ಬರುತ್ತೀನಿ ಎಂದು ಹೇಳಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಸುಮ್ಮನೆ ಅನಗತ್ಯವಾಗಿ ಅವರ ಹೆಸರನ್ನು ಪ್ರಾಸ್ತಾಪ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ. ಈ ಗೊಂದಲವನ್ನು ಅವರು ಮಾಡಿಕೊಳ್ಳಬಾರದು, ನಾವೂ ಮಾಡಿಕೊಳ್ಳಬಾರದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ವರ್ಸಸ್ ಸಾಹುಕರ್ ಫೈಟ್ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಕ್ಕೆ ಮುಹೂರ್ತ ಇಟ್ಟಿದೆ ಅನ್ನುವ ಹೇಳಿಕೆಯನ್ನು ಬಿಎಸ್‍ವೈ ಕೊಟ್ಟಿದ್ದಾರೆ. ಲಕ್ಷ್ಮಿ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿಗೆ ಬರುತ್ತಾರೆ ಅನ್ನುವ ಊಹಾಪೋಹದ ಬಗ್ಗೆ ಸ್ಪಷ್ಟನೆ ಕೊಡುವ ಸಂದರ್ಭದಲ್ಲಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ತಲೆಕೆಟ್ಟಿದ್ಯಾ, ಅವರಿಂದಲೇ ಅತೃಪ್ತರು ಮುಂಬೈ ಸೇರಿದ್ದಾರೆ ಎಂದು ಬಿಎಸ್‍ವೈ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಎಸ್‍ವೈ ಅವರ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.