ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ದೇವರ ಮನೆ ಗುಡ್ಡ ಸದ್ಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿನಾಟ, ಹಸಿರು ಹೊದ್ದಿಕೊಂಡಿರುವ ಪ್ರಕೃತಿಗೆ ಪ್ರವಾಸಿಗರು ಮನಸೋಲುತ್ತಿದ್ದಾರೆ.
ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ಇಲ್ಲಿನ ಪ್ರಕೃತಿಯ ಸೌಂದರ್ಯವನ್ನ ನೋಡುವುದಕ್ಕೆ ಎರಡು ಕಣ್ಣು ಸಾಲದು. ಗುಡ್ಡದ ತುದಿಯಲ್ಲಿ ನಿಂತು ಸುತ್ತಲೂ ಕಣ್ಣಾಯಿಸಿದರೆ ಇಲ್ಲಿನ ಸೌಂದರ್ಯವನ್ನ ವರ್ಣಿಸುವುದಕ್ಕೆ ಪದವಿರದು. ಇಲ್ಲಿನ ಅಂದಚೆಂದಕ್ಕೆ ಮನಸೋಲದವರೇ ಇಲ್ಲ. ಟ್ರಕ್ಕಿಂಗ್ ಪ್ರಿಯರಿಗಂತೂ ನೆಚ್ಚಿನ ತಾಣವಾಗಿದೆ. ಚಾರಣಿಗರು ಆಗಾಗ್ಗೆ ಬಂದು ಇಲ್ಲಿನ ಪ್ರಕೃತಿ ಮಡಿಲಲ್ಲಿ ರಮಿಸಿ ಹೋಗುತ್ತಾರೆ. ಇಲ್ಲಿನ ಐತಿಹಾಸಿಕ ಕಾಲಭೈರವೇಶ್ವರನ ದರ್ಶನ ಪಡೆದು, ಮೈಕೊರೆವ ಚಳಿಯಲ್ಲಿ 20-25 ಕಿ.ಮೀ. ಟ್ರಕ್ಕಿಂಗ್ ಮಾಡುತ್ತಾರೆ ಎಂದು ಪ್ರವಾಸಿಗ ಕಿರಣ್ ಹೇಳಿದ್ದಾರೆ.
ಕರಾವಳಿ, ಸಕಲೇಶಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನ ಇಲ್ಲೇ ನಿಂತು ನೋಡಬಹುದು. ಇಲ್ಲಿ ಪ್ರತಿದಿನ ಪ್ರವಾಸಿಗರೂ ಬರುತ್ತಾರೆ. ಮಳೆ-ಬಿಸಿಲು-ಚಳಿ ಯಾವುದೇ ಇರಲಿ ಪ್ರವಾಸಿಗರಂತು ಇದ್ದೇ ಇರುತ್ತಾರೆ. ಬೆಟ್ಟ-ಗುಡ್ಡಗಳನ್ನ ಹತ್ತಿ, ಕಾಡು-ಮೇಡು ಅಲೆದು ಎಂಜಾಯ್ ಮಾಡುತ್ತಾರೆ. ಮಳೆ ಪ್ರಮಾಣ ಯಥೇಚ್ಛವಾಗಿರುವುದರಿಂದ ದಿನದಿಂದ ದಿನಕ್ಕೆ ಇಲ್ಲಿನ ಸೌಂದರ್ಯ ಇಮ್ಮಡಿಗೊಳ್ಳುತ್ತಿದೆ.
ಮಳೆಗಾಲವಾಗಿರುವುದರಿಂದ ಇಲ್ಲಿಗೆ ಬರುತ್ತಿರುವ ಪ್ರವಾಸಿಗರು ಸೌಂದರ್ಯವನ್ನ ಹಾಡಿ, ಹೊಗಳಿ ಪುಳಕಿತಗೊಳ್ಳುತ್ತಿದ್ದಾರೆ. ಸುತ್ತಮುತ್ತಲಿನ ಹಚ್ಚಹಸಿರ ವನರಾಶಿ ಕಂಡ ಕಾಂಕ್ರಿಟ್ ನಾಡಿಗರು ಕಾನನದ ಮಧ್ಯೆ ಒಂದಿಷ್ಟು ರಿಲ್ಯಾಕ್ಸ್ ಆಗುತ್ತಿದ್ದಾರೆ. ಗುಡ್ಡದ ಮೇಲೇರಿ ಸೆಲ್ಫಿಗೆ ಪೋಸ್ ನೀಡುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ. ವಿಶಾಲವಾಗಿ ಹರಡಿಕೊಂಡಿರುವ ಪರ್ವತದ ಸಾಲುಗಳನ್ನ ನೋಡುವುದಕ್ಕೆ ಚೆಂದ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.
ಮುಂಗಾರಿನ ಸಿಂಚನದಿಂದ ದೇವರಮನೆ ದೇವಲೋಕದಂತಾಗಿದೆ. ಗಿರಿ ಶಿಖರಗಳು ಮತ್ತಷ್ಟು ರಂಗು ಪಡೆದಿವೆ. ಕಣ್ಮುಚ್ಚಿ ಬಿಡುವಷ್ಟರಲ್ಲಿ ಕಣ್ಮರೆಯಾಗುವ ಇಲ್ಲಿನ ಮಂಜಿನಾಟ ಅದ್ಭುತವಾಗಿದೆ.