ಬಿಜೆಪಿಗೆ ಬೆಂಬಲ ಕೊಡುತ್ತಾ ಜೆಡಿಎಸ್?: ಸಾರಾ ಮಹೇಶ್, ಕಮಲ ಮುಖಂಡರ ಭೇಟಿ!

Public TV
1 Min Read
BJP SaRa Mahesh

ಬೆಂಗಳೂರು: ಬಿಜೆಪಿಗೆ ಬೆಂಬಲ ಕೊಡಲು ಜೆಡಿಎಸ್ ಮುಂದೆ ಬಂದಿತೇ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ನಗರದ ಕೆ.ಕೆ.ಗೆಸ್ಟ್ ಹೌಸ್‍ನಿಂದ ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ ಹಾಗೂ ಮುರಳೀಧರ್ ರಾವ್ ಅವರು ಹೊರ ಬಂದರು. ಅವರ ಬೆನ್ನಲ್ಲೇ ಜೆಡಿಎಸ್‍ನ ಸಚಿವ ಸಾರಾ ಮಹೇಶ್ ಅವರು ಹೊರ ಬಂದಿದ್ದು ಭಾರೀ ಕುತೂಹಲ ಮೂಡಿಸಿದೆ.

ಸಾ.ರಾ.ಮಹೇಶ್ ಅವರ ಜೊತೆ ಮಾತನಾಡಲು ಬಂದಿದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್.ಈಶ್ವರಪ್ಪನವರು, ನಾನು ಹಾಗೂ ಮುರಳೀಧರ್ ರಾವ್ ಮಾತನಾಡಲು ಬಂದಿದ್ದೇವು. ನನಗೂ ಸಾ.ರಾ.ಮಹೇಶ್ ಅವರಿಗೂ ಏನ್ ಸಂಬಂಧ ಎಂದು ಹೇಳಿದರು.

Eshwarappa

ಕೆ.ಎಸ್.ಈಶ್ವರಪ್ಪ ಅವರು ಕೆ.ಕೆ.ಗೆಸ್ಟ್ ಹೌಸ್‍ನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಸಚಿವ ಸಾರಾ ಮಹೇಶ್ ಅವರು ಹೊರ ಬಂದರು. ಈ ವೇಳೆ ಮಾತನಾಡಿದ ಸಚಿವರು, ಈಶ್ವರಪ್ಪನವರು ಕ್ಷೇತ್ರದ ಬಗ್ಗೆ ವಿಚಾರಿಸಲು ಬಂದಿದ್ದರು. ನಾನು ಸಚಿವ, ಹೀಗಾಗಿ ಭೇಟಿಯಾಗಲು ಬಂದಿದ್ದೆ. ಅದರಲ್ಲಿ ಏನು ತಪ್ಪು ಎಂದು ಮರು ಪ್ರಶ್ನೆ ಮಾಡಿದರು.

ಸಚಿವ ಸಾ.ರಾ.ಮಹೇಶ್ ಅವರು 9 ಗಂಟೆ ಸುಮಾರಿಗೆ ಬಂದಿದ್ದರು. ಮೀಟಿಂಗ್ ಇದೆ ಅಂತ ರೂಂ ಕೇಳಿದ್ದರು. ಆಮೇಲೆ ಕೆ.ಎಸ್.ಈಶ್ವರಪ್ಪ, ಮುರುಳಿಧರ್ ರಾವ್ ಬಂದರು. ನಂತರ ಮೀಟಿಂಗ್ ಮುಗಿಸಿ ಹೊರಟರು ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಜೆಡಿಎಸ್, ಕುಮಾರಕೃಪ ಗೆಸ್ಟ್ ಹೌಸ್‍ಗೆ ಶಾಸಕರು, ಮಂತ್ರಿಗಳು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಇದೇ ಸಂದರ್ಭದಲ್ಲಿ ಸಾ.ರಾ.ಮಹೇಶ್ ಅವರು ಆಕಸ್ಮಿಕವಾಗಿ ಕೆ.ಎಸ್.ಈಶ್ವರಪ್ಪ, ಮುರಳೀಧರ ರಾವ್ ಅವರನ್ನು ದಾರಿ ಮಧ್ಯೆ ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸದೃಢವಾಗಿದ್ದು, ಸಮರ್ಥ ಆಡಳಿತ ಮುಂದುವರಿಸಲಿದೆ ಎಂದು ಟ್ವಿಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *