ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಕೆ ಸಾಧ್ಯವಿಲ್ಲ. ರಾಜೀನಾಮೆ ಸಲ್ಲಿಸಿದ ಎಲ್ಲ ಶಾಸಕರು ಅಚಲವಾಗಿ ನಿಂತಿದ್ದರಿಂದ ಮನವೊಲಿಕೆ ಮಾಡಲು ಮತ್ತೊಮ್ಮೆ ಮುಂದಾಗಲ್ಲ. ಒಂದು ಮನವೊಲಿಕೆಗೆ ಮುಂದಾದ್ರೆ ರಾಜ್ಯದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂದು ಕೈ ನಾಯಕರು ಸಿಎಂಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಕುಮಾರಕೃಪಾ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್, ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಜಂಟಿಯಾಗಿ ಸಭೆ ನಡೆಸಿದ್ದರು. ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸುವ ಎಲ್ಲ ಪ್ರಯತ್ನವನ್ನು ಮಾಡಲಾಗಿದೆ. ಇನ್ನು ಮುಂದೆ ಯಾರು ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾಗಬಾರದು ಎಂದು ಸಿದ್ದರಾಮಯ್ಯನವರು ಸಭೆಯಲ್ಲಿ ತಮ್ಮ ಎಲ್ಲ ಸಚಿವರು ಮತ್ತು ಕಾರ್ಯಕರ್ತರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಸಿದ್ದರಾಮಯ್ಯನವರು ಮಾತು ಕೇಳಿದ ಮುಖ್ಯಮಂತ್ರಿಗಳು, ನೀವೇ ಕೈ ಚೆಲ್ಲಿದ್ರೆ ನಾನು ಅಸಹಾಯಕ ಎಂದು ರಾಜೀನಾಮೆಯನ್ನು ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ಕರೆದಿರುವ ಮುಖ್ಯಮಂತ್ರಿಗಳು ಸಚಿವರೊಂದಿಗೆ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.