ಮುಂಬೈ: ಈ ಡ್ರಾಮಾ ಎಲ್ಲಾ ಮುಗಿದ ಮೇಲೆ ಯಾಕೆ, ಯಾರಿಂದ ಇದೆಲ್ಲಾ ಆಯಿತು ಎಂಬುದನ್ನು ಮಾಧ್ಯಮದ ಮುಂದೆ 1 ಗಂಟೆ ಬಂದು ನಾನು ಹೇಳುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದ ರಿನೈಸನ್ಸ್ ಹೋಟೆಲ್ ನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು ಡಿ.ಕೆ ಶಿವಕುಮಾರ್ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ನಾವು ಕೊನೆಯದಾಗಿ ನಿರ್ಣಯ ತೆಗೆದುಕೊಂಡಿದ್ದೇವೆ. ಕಳೆದ ಒಂದು ವರ್ಷದಿಂದ ನಾವು ಇದನ್ನು ಮಾಡಿ ಇಂದು ಒಂದು ಮಟ್ಟಕ್ಕೆ ತಂದಿದ್ದೇವೆ. ನಾವು ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಾವು ಯಾವುದೇ ಕಾರಣಕ್ಕೂ ಡಿಕೆಶಿ ಅವರನ್ನು ಭೇಟಿಯಾಗುವುದಿಲ್ಲ. ಬಿಜೆಪಿ ಅವರ ಸಂಪರ್ಕದಲ್ಲೂ ಇಲ್ಲ, ನಾವು ನಮ್ಮ ಸ್ವಂತ ಖರ್ಚಿನಿಂದ ಇಲ್ಲಿಗೆ ಬಂದಿದ್ದೇವೆ ಎಂದರು.
ಡಿ.ಕೆ ಶಿವಕುಮಾರ್ ನನ್ನ ಸ್ನೇಹಿತನಾಗಿದ್ದ. ಈಗ ಅವನಿಗೆ ಸಾಕಷ್ಟು ತೊಂದರೆಗಳು ಆಗುತ್ತಿದೆ. ಈಗ ಮತ್ತೆ ನಾವು ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಡಿಕೆಶಿಗೆ ದೇವರು ಒಳ್ಳೆಯದು ಮಾಡಲಿ. ನಾವು ರಾಜೀನಾಮೆ ಹಿಂಪಡೆಯುವುದಿಲ್ಲ. ಇಂದು ಮತ್ತೆ ನಾಲ್ಕು ಜನ ನಮ್ಮ ಜೊತೆ ಸೇರಲಿದ್ದಾರೆ. ನಮಗೆ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ಗೌರವ ಇದೆ. ಅವರು ಬೇಗ ನಮ್ಮ ರಾಜೀನಾಮೆ ಸ್ವೀಕಾರ ಮಾಡಲಿ. ನನ್ನ ವೈಯಕ್ತಿಕ ಜೀವನವನ್ನು ಕೂಡ ಸಾಗಿಸುತ್ತೇನೆ. ನನಗೆ ಶಾಸಕನಾಗಲೂ ಇಷ್ಟವಿಲ್ಲ ಎಂದು ರಮೇಶ್ ಹೇಳಿದರು.
ಡಿ.ಕೆ ಶಿವಕುಮಾರ್ ಬಗ್ಗೆ ಹೇಳುವುದು ಬಹಳ ಇದೆ. ಇದೆಲ್ಲಾ ಡ್ರಾಮಾ ಮುಗಿದ ಮೇಲೆ 1 ಗಂಟೆ ಮಾಧ್ಯಮದ ಮುಂದೆ ಬಂದು ಯಾಕೆ ಹೀಗೆ ಆಯ್ತು? ಯಾರಿಂದ ಆಯ್ತು ಎಂಬುದನ್ನು ನಾನು ತಿಳಿಸುತ್ತೇನೆ. ಈಗ ನಾವು ಯಾವ ಕಾರಣಕ್ಕೂ ಡಿಕೆಶಿಯನ್ನು ಭೇಟಿ ಆಗುವುದಿಲ್ಲ. ನಮ್ಮ ನಾಯಕ ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯಬಾರದಿತ್ತು. ಸಿದ್ದರಾಮಯ್ಯ ಅವರು ಒಳ್ಳೆಯ ನಾಯಕ, ಅವರು ಸುಳ್ಳು ಹೇಳುವುದಿಲ್ಲ. ಆದರೆ ಯಾರ ಒತ್ತಡದಿಂದ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ನಮಗೆ ಸಿದ್ದರಾಮಯ್ಯ ಹಾಗೂ ಖರ್ಗೆ ನಮ್ಮ ನಾಯಕರು. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಹೊರತು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ನಾವು ರಾಜೀನಾಮೆ ಹಿಂಪಡೆಯಲ್ಲ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಇತ್ತ ಈಗಾಗಲೇ ಮುಂಬೈಗೆ ತೆರಳಿ ಅತೃಪ್ತರು ವಾಸ್ತವ್ಯ ಇರುವ ಹೋಟೆಲ್ ಮುಂಭಾಗದಲ್ಲಿರುವ ಡಿಕೆಶಿ, ಶಾಸಕರನ್ನು ಭೇಟಿಯಾಗದೇ ಒಂದು ಹೆಜ್ಜೆ ಹಿಂದೆ ಇಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.