ಜೈಪುರ್: ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸುತ್ತಿದ್ದರೂ ಪೊಲೀಸರು ನೋಡುತ್ತಾ, ನಗುತ್ತಾ ನಿಂತ ಅವಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಜುಂಜುನು ಜಿಲ್ಲೆಯ ಗುಧಾ ಗ್ರಾಮದ ಬಾಬೂರಾವ್ ಸೈನಿ (35) ಆತ್ಮಹತ್ಯೆಗೆ ಯತ್ನಿಸಿದ್ದ ರೈತ. ಘಟನೆಯಲ್ಲಿ ಸೈನಿ ಅವರ ದೇಹವು ಶೇ.90 ರಷ್ಟು ಸುಟ್ಟಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಆಗಿದ್ದೇನು?:
ಜುಂಜುನು ಅರಣ್ಯ ಭೂಮಿಯಲ್ಲಿ ಕಟ್ಟಿದ್ದ ಅಕ್ರಮ ಮನೆ ತೆರವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ಜೊತೆಗೆ ತೆರಳಿದ್ದರು. ಇದನ್ನು ವಿರೋಧಿಸಿ ರೈತ ಸೈನಿ ಬೆಂಕಿ ಹಚ್ಚಿಕೊಂಡಿದ್ದಾರೆ. ಆದರೆ ಪೊಲೀಸರು ರಕ್ಷಿಸುವ ಬದಲು ನಗುತ್ತಾ ದೂರ ಓಡಿದ್ದಾರೆ. ಬಳಿಕ ಸೈನಿ ನೆಲಕ್ಕೆ ಬೀಳುತ್ತಿದ್ದಂತೆ ಸಂಬಂಧಿಕರು ರಕ್ಷಣೆಗೆ ಮುಂದಾದರು.
ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರೋ ಸೈನಿ ಅವರನ್ನು ಸಮೀಪದ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅರಣ್ಯದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ. ಅದನ್ನು ತೆರವುಗೊಳಿಸಲು ಹೋದ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಸೈನಿ ಹಲ್ಲೆಗೆ ಮುಂದಾದರು. ಬಳಿಕ ಸೀಮೆಎಣ್ಣೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.