ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರನ್ನು ಸ್ವಾಗತಿಸಲು ಇತ್ತ ಬಿಜೆಪಿಯಿಂದ ಭರ್ಜರಿ ತಯಾರಿ ನಡೆಯುತ್ತಿದೆ.
ಸೋಮವಾರ ಪೂರ್ವ ನಿಗದಿತ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಇರಲ್ಲ ಎಂದಿರುವ ಸ್ಪೀಕರ್ ರಮೇಶ್ ಕುಮಾರ್ ಅವರು ಮಂಗಳವಾರ ತಮ್ಮ ಕಚೇರಿಗೆ ಬಂದು ರಾಜೀನಾಮೆಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಬಿಜೆಪಿಯವರು ಇದನ್ನೇ ಕಾಯುತ್ತಿದ್ದಾರೆ. ಶಾಸಕರ ರಾಜೀನಾಮೆ ಅಂಗೀಕಾರವಾದ ತಕ್ಷಣವೇ ಅತೃಪ್ತ ಶಾಸಕರಿಗೆ ಅದ್ಧೂರಿ ಸ್ವಾಗತ ನೀಡಲು ಬಿಜೆಪಿ ಸಜ್ಜಾಗಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ.
ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಪ್ಲಾನ್ ನಡೆದಿದೆ. ಹೀಗಾಗಿ ರಾಜೀನಾಮೆ ಅಂಗೀಕಾರಕ್ಕಾಗಿ ಬಿಜೆಪಿ ಹೈಕಮಾಂಡ್ ಸೈಲೆಂಟಾಗಿ ಕಾದು ಕುಳಿತಿದ್ದು, ಎಲ್ಲ ಅತೃಪ್ತರನ್ನು ಒಂದೇ ವೇದಿಕೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಮಾಡುವ ಯೋಜನೆ ರೂಪಿಸಿಲಾಗಿದೆ ಎನ್ನಲಾಗುತ್ತಿದೆ.
14 ಮಂದಿ ಅತೃಪ್ತ ಶಾಸಕರು ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಪ್ರತಿಗಳನ್ನು ಕೊಟ್ಟಿದ್ದಾರೆ. ಅಲ್ಲದೆ ರಾಜ್ಯಪಾಲರಿಗೂ ಒಂದು ಪ್ರತಿಯನ್ನು ನೀಡಿದ್ದಾರೆ. ಹೀಗಾಗಿ ನಿರ್ಧಾರ ಸಭಾಧ್ಯಕ್ಷರ ಅಂಗಳದಲ್ಲಿದೆ. ಸಭಾಧ್ಯಕ್ಷರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಿ ನಂತರ ರಾಷ್ಟ್ರೀಯ ಹಾಗೂ ರಾಜ್ಯದ ಪ್ರಮುಖರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ನಾವು ಆಪರೇಷನ್ ಕಮಲ ಮಾಡಿಲ್ಲ. ಅವರಿಗೇ ಪಕ್ಷದಲ್ಲಿ ಅಸಮಾಧಾನ ಕಂಡುಬಂದಿದ್ದರಿಂದ ರಾಜೀನಾಮೆ ನೀಡುತ್ತಿದ್ದಾರೆ ಎಂದು ಹೇಳುತ್ತಿರುವ ಬಿಜೆಪಿ ಸೈಲೆಂಟಾಗಿಯೇ ಕಾರ್ಯಪ್ರವೃತ್ತವಾಗಿದೆ. ಅಮಿತ್ ಶಾ ಅವರು ಕೂಡ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬೇಡಿ. ರಾಜಭವನಕ್ಕೆ ತೆರಳಬೇಡಿ. ಹಾಗೂ ಅತೃಪ್ತರನ್ನು ಸಂಪರ್ಕಿಸುವ ಕೆಲಸವನ್ನೂ ಮಾಡಬೇಡಿ ಎಂದು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಕೂಡ ರಾಜ್ಯ ರಾಜಕಾರಣದಲ್ಲಿ ಏನೇನು ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ಕಾದು ನೋಡುವುದಾಗಿ ತಿಳಿಸಿದ್ದಾರೆ.
ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
* ಎಚ್ ವಿಶ್ವನಾಥ್- ಹುಣಸೂರು
* ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
* ನಾರಾಯಣ ಗೌಡ- ಕೆ. ಆರ್ ಪೇಟೆ
ರಾಜೀನಾಮೆ ಕೊಟ್ಟ ಕೈ ಶಾಸಕರು:
* ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
* ರಮೇಶ್ ಜಾರಕಿಹೊಳಿ- ಗೋಕಾಕ್
* ಎಸ್.ಟಿ ಸೋಮಶೇಖರ್- ಯಶವಂತಪುರ
* ಪ್ರತಾಪ್ ಗೌಡ ಪಾಟೀಲ್- ಮಸ್ಕಿ
* ಬಿ.ಸಿ ಪಾಟೀಲ್- ಹಿರೇಕೆರೂರು
* ಮಹೇಶ್ ಕುಮಟಳ್ಳಿ- ಅಥಣಿ
* ಭೈರತಿ ಬಸವರಾಜ್- ಕೆ.ಆರ್ ಪುರಂ
* ಶಿವರಾಂ ಹೆಬ್ಬಾರ್- ಯಲ್ಲಾಪುರ
* ಮುನಿರತ್ನ- ರಾಜರಾಜೇಶ್ವರಿ ನಗರ
* ರೋಷನ್ ಬೇಗ್- ಶಿವಾಜಿನಗರ (ರಾಜೀನಾಮೆಗೆ ಮುಂದಾದ ಶಾಸಕ)
https://www.youtube.com/watch?v=SQl2E-lrhg4