ಬೆಂಗಳೂರು: ಪತನದ ಅಂಚಿಗೆ ತಲುಪಿರುವ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಲು ಲೋಕೋಪಯೋಗಿ ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಮುಂದಾಗಿದ್ದಾರೆ.
ಶನಿವಾರ ತಡರಾತ್ರಿ ಗೋಪಾಲಯ್ಯ ಅವರ ನಿವಾಸಕ್ಕೆ ಆಗಮಿಸಿದ ಭವಾನಿ ರೇವಣ್ಣ ಮಾತುಕತೆ ನಡೆಸಿದ್ದಾರೆ. ಹೇಮಲತಾ ಗೋಪಾಲಯ್ಯ ಮತ್ತು ಪುತ್ರನ ಜೊತೆ ಮಾತುಕತೆ ನಡೆಸಿ ರಾಜೀನಾಮೆಯನ್ನು ವಾಪಸ್ ಪಡೆಯಲು ಮನವಿ ಮಾಡಿದ್ದಾರೆ.
ರಾಜಕೀಯ ಕ್ರಾಂತಿಯಲ್ಲಿ ತಮ್ಮ ಕೈ ಚಳಕ ತೋರಿಸಲು ಏಕಾಏಕಿ ಫೀಲ್ಡಿಗಿಳಿದು ಭವಾನಿ ರೇವಣ್ಣ ಸರ್ಕಾರ ಉಳಿಸುವ ಪ್ರಯತ್ನ ನಡೆಸಿದ್ದಾರೆ. ಪತಿ ಬಿಜೆಪಿಗೆ ಹೋದರೂ ನಾನು ಜೆಡಿಎಸ್‍ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಎಂದು ಹೇಮಲತಾ ಗೋಪಾಲಯ್ಯ ಹೇಳಿದ್ದಾರೆ.
ನಿಷ್ಠಾವಂತ ಶಾಸಕ ಗೋಪಾಲಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕೇಳಿ ಜೆಡಿಎಸ್ ನಾಯಕರೇ ಶಾಕ್ ಆಗಿದ್ದಾರೆ. 2013 ಮತ್ತು 2018ರಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ನಿಂದ ಸ್ಪರ್ಧಿಸಿ ಗೋಪಾಲಯ್ಯ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರು ಬಿಬಿಎಂಪಿಯ ಜೆಡಿಎಸ್ ಸದಸ್ಯರಾಗಿದ್ದು, ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ.