ಬೆಂಗಳೂರು: ರಾಜೀನಾಮೆ ಸುನಾಮಿಯನ್ನು ತಡೆಯಲು ತನ್ನ ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟಿಗೆ ಶಿಫ್ಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.
ಒಂದೇ ದಿನ ಕಾಂಗ್ರೆಸ್ಸಿನ 9 ಜೆಡಿಎಸ್‍ನ ಇಬ್ಬರು 11 ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಸದ್ಯಕ್ಕೆ ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ರಾಜೀನಾಮೆ ಪತ್ರಗಳನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಮೂರು ದಿನ ಸಿಕ್ಕಿದ ಪರಿಣಾಮ ಹೈಕಮಾಂಡ್ ಉಳಿದ ಕೈ ಶಾಸಕರನ್ನು ರೆಸಾರ್ಟಿಗೆ ಶಿಫ್ಟ್ ಮಾಡಲು ಪ್ಲಾನ್ ಮಾಡಿದೆ.
ಈಗಾಗಲೇ 9 ಕೈ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇದರಿಂದ ಕಾಂಗ್ರೆಸ್ ತಲೆಕೆಡಿಸಿಕೊಂಡಿದ್ದು, ಇನ್ನಷ್ಟು ಶಾಸಕರ ರಾಜೀನಾಮೆ ತಡೆಯಲು ಮತ್ತು ಬಿಜೆಪಿ ಅವರ ಸಂಪರ್ಕಕ್ಕೆ ಶಾಸಕರು ಸಿಗದಂತೆ ತಡೆಯಲು ಈ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಈ ಹಿಂದೆ ಸರ್ಕಾರ ರಚನೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಬಿಡದಿಯ ರೆಸಾರ್ಟಿಗೆ ತೆರಳಿದ್ದರು. ಇದಾದ ಬಳಿಕ ಹೈದರಾಬಾದ್‍ಗೆ ತೆರಳಿದ್ದರು. ವಿಶ್ವಾಸಮತಯಾಚನೆಯ ದಿನ ಹೈದರಾಬಾದ್‍ನಿಂದ ಬಸ್ಸನಲ್ಲೇ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದರು.