ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಸ್ ಸಮ್ಮಿಶ್ರ ಸರ್ಕಾರ ಕೊನೆಗೂ ಪತನಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಸಿಎಂ ಅವರು ಅಮೆರಕದಿಂದ ವಾಪಸ್ಸಾಗುತ್ತಿದ್ದಂತೆಯೇ ಶಾಕ್ ಎದುರಾಗಿದೆ.
ಲೋಕಸಭಾ ಚುನಾವಣೆಯ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿತ್ತು. ಆದರೆ ಈ ಬಗ್ಗೆ ಎರಡೂ ಪಕ್ಷದ ಮುಖಂಡರು, ಸರ್ಕಾರ 5 ವರ್ಷ ಪೂರ್ಣಗೊಳ್ಳುವುದಾಗಿ ಭರವಸೆ ನೀಡುತ್ತಲೇ ಬಂದರು. ಈ ಮಧ್ಯೆ ಸಿಎಂ ಅವರು ಕಾರ್ಯಕ್ರಮದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದು, ಇದೀಗ ಅವರು ಅಲ್ಲಿಂದ ವಾಪಸ್ ಆಗುವ ಮೊದಲೇ ಸರ್ಕಾರ ಬಿದ್ದು ಹೋಗುವ ಹಂತಕ್ಕೆ ಬಂದಿದೆ.
ಸಿಎಂ ಅವರು ಅಮೆರಿಕ ತೆರಳಿದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜಕಾರಣದಲ್ಲಿ ಮತ್ತಷ್ಟು ಬೆಳವಣಿಗೆಗಳು ನಡೆದಿದ್ದು, ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇವರಿಬ್ಬರು ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ನೀಡಿದ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ತಲ್ಲಣವೇರ್ಪಟ್ಟಿತ್ತು. ಅಲ್ಲದೆ ಎರಡು ಪಕ್ಷದ ಮುಖಂಡರು ಏನೂ ಆಗದಂತೆ ಹೇಳಿಕೆಗಳನ್ನು ಕೊಡುತ್ತಿದ್ದರು. ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಸರ್ಕಾರಕ್ಕೆ ಏನು ಆಗುವುದಿಲ್ಲ ಎಂದು ಹೇಳಿ ಮಾಧ್ಯಮಗಳ ವಿರುದ್ಧ ಗರಂ ಆಗುತ್ತಿದ್ದರು. ಬಿಜೆಪಿಯವರು ಕೂಡ ಸಮ್ಮಿಶ್ರ ಸರ್ಕಾರ ಜಾಸ್ತಿ ದಿನ ಉಳಿಯಲ್ಲ. ಅತೀ ಶೀಘ್ರದಲ್ಲೇ ಪತನಗೊಳ್ಳುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ.
ಇಷೆಲ್ಲ ಅಲ್ಲೋಲ ಕಲ್ಲೊಲ್ಲಗಳ ಮಧ್ಯೆ ಕೇಂದ್ರ ಬಜೆಟ್ ಬಂದಿದೆ. ಶುಕ್ರವಾರ ನರೇಂದ್ರ ಮೋದಿ ಸರ್ಕಾರದ 2ನೇ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಒಂದೆಡೆ ಬಜೆಟ್ ಮಂಡನೆಯಾಗುತ್ತಿದ್ದರೆ ಇತ್ತ ಸಮ್ಮಿಶ್ರ ಸರ್ಕಾರದ ಅತೃಪ್ತರು ರಾಜೀನಾಮೆ ನೀಡುವ ಪ್ಲಾನ್ ನಡೆಯುತಿತ್ತು. 13 ಮಂದಿ ಶಾಸಕರು ರಾಜೀನಾಮೆ ನೀಡುವ ನಿರ್ಧಾರವನ್ನು ನಿನ್ನೆಯೇ ಮಾಡಿದ್ದರು. ಆದರೆ ಬಜೆಟ್ ಇದ್ದ ಕಾರಣ ಅದನ್ನು ಬಹಿರಂಗ ಪಡಿಸಲಿಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇಂದು ಬೆಳಗ್ಗಿನಿಂದಲೇ ಪಬ್ಲಿಕ್ ಟಿವಿ 13 ಮಂದಿ ಶಾಸಕರು ರಾಜೀನಾಮೆ ನೀಡುವ ಬಗ್ಗೆ ವರದಿ ಮಾಡುತಿತ್ತು. 13 ಶಾಸಕರರು ಎರಡು ತಂಡವಾಗಿ ಬಂದು ರಾಜೀನಾಮೆ ನೀಡುತ್ತಾರೆ ಎನ್ನುವ ನಿಖರ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಏನು ಆಗುವುದಿಲ್ಲ. ನೀವು ಹೇಳಿದ ಶಾಸಕರು ಕಾಂಗ್ರೆಸ್ಸಿನ ಹಿರಿಯ ನಾಯಕರು. ಅವರು ರಾಜೀನಾಮೆ ನೀಡುವುದಿಲ್ಲ ಎಂದೇ ಹೇಳಿದ್ದರು. ಅಲ್ಲದೆ ಮಾಧ್ಯಮದವರು ಕ್ರೆಡಿಬಿಲಿಟಿ ಹಾಳು ಮಾಡಿಕೊಳ್ಳಬೇಡಿ. ಊಹಾಪೋಹದ ಸುದ್ದಿಗಳನ್ನು ಬಿತ್ತರಿಸಬೇಡಿ ಎಂದು ಹೇಳಿದರು. ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ರಾಜೀನಾಮೆ ನೀಡಲು ಬಂಡಾಯ ಶಾಸಕರು ವಿಧಾನಸೌಧ ಪ್ರವೇಶಿಸಿದ್ದರು.
ಯಾರೆಲ್ಲ ರಾಜೀನಾಮೆ ನೀಡಿದ್ದಾರೆ..?
ಮೊದಲನೆಯದಾಗಿ ಬಿಡುಗಡೆಯಾಗಿರುವ ಬಂಡಾಯಗಾರರ ಪಟ್ಟಿಯಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿಪಾಟೀಲ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ರಾಜೀನಾಮೆ ನೀಡಿದ್ದಾರೆ. ಹುಣಸೂರು ಶಾಸಕ ಎಚ್. ವಿಶ್ವನಾಥ್, ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ತಲ್ಲಣ ಶುರುವಾಗಿದೆ.
ಎರಡನೇ ತಂಡದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸ್ಪೀಕರ್ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಈ ಬೆಳವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ..